ಗುರಿ ಮತ್ತು ದಾರಿ ಮರೆತ ಕಾಂಗ್ರೆಸ್ ವಿರೋಧ ಪಕ್ಷದಲ್ಲಿರಲು ನಾಲಾಯಕ್: ನಳಿನ್ ಕುಮಾರ್

Update: 2020-11-24 17:49 GMT

ದಾವಣಗೆರೆ, ನ.24: ಗುರಿ ಮತ್ತು ದಾರಿ ಮರೆತ ಪರಿಣಾಮ ದೇಶದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿರಲು ಕಾಂಗ್ರೆಸ್ ಪಕ್ಷ ನಾಲಾಯಕ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದರು. 

ಮಂಗಳವಾರ ನಗರದ ಅಪೂರ್ವ ರೇಸಾರ್ಟ್ ನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಬಿಜೆಪಿ 25 ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ 1,800 ಶಾಸಕರಿದ್ದರು. ಬಿಜೆಪಿ 100 ಶಾಸಕರಿದ್ದರು. ಅದರೆ ಈಗ ದೇಶದಲ್ಲಿ ಬಿಜೆಪಿಯ 1800 ಶಾಸಕರಿದ್ದಾರೆ. ಕಾಂಗ್ರೆಸ್ ಗೆ 700 ಶಾಸಕರಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯ ಅಧಿಕಾರಕ್ಕಿಂತ ಮೊದಲು ಸೇವೆ. ಗುರಿ ಮತ್ತು ದಾರಿ ಮುಖ್ಯವಾದುದ್ದರಿಂದ ಇಂದು ಬಿಜೆಪಿ ವಿಶ್ವದಲ್ಲಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಹೇಳಿದರು. 

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮಾತ್ರ ಎದ್ದು ಕೂರುತ್ತದೆ. ಅದರೆ ಬಿಜೆಪಿ ಚುನಾವಣೆ ಇರಲಿ, ಬಿಡಲಿ ಅಧಿಕಾರ ಸಿಗಲಿ ಬಿಡಲಿ ಸಂಘಟನೆ ಮಾತ್ರ ಬಿಡುವುದಿಲ್ಲ. ಸಂಘಟನೆ ಹಾಗೂ ಜನರೊಂದಿಗೆ ನಿರಂತರ ಸಂಪರ್ಕದಿಂದಾಗಿ ಹಾಗೂ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಇಂದು ದೇಶದ ಚುಕ್ಕಾಣಿ ಹಿಡಿದಿದೆ ಎಂದರು. 

ರಾಜಕೀಯವೆಂದರೆ ಅದು ಸಮಾಜ ಸೇವೆ. ಸೇವೆಯಿಂದ ಹೊರತಾಗಿ ರಾಜಕೀಯವಿಲ್ಲ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವವರು ರಾಜಕಾರಣಿಗಳು ಆಗಲು ಸಾಧ್ಯ. ತಮ್ಮಲ್ಲಿರುವ ಕೌಶಲ್ಯವನ್ನು ರಾಜಕಾರಣದಲ್ಲಿ ಬಳಸಿಕೊಂಡು ಬೆಳೆಯಲು ಪ್ರಕೋಷ್ಠಗಳು ರಾಜಕಾರಣದ ಬಾಗಿಲು ಆಗಿದೆ. ಸರ್ವರನ್ನು ಪಕ್ಷದೊಳಗೆ ಕರೆದುಕೊಂಡು ಬರುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. 

ಅಧಿಕಾರವಿಲ್ಲದಿದ್ದಾಗ ಸೇವೆ ಮರೆತಿಲ್ಲ. ಅಧಿಕಾರವಿದ್ದಾಗ ಕೊಟ್ಟ ಮಾತು ಮರೆತಿಲ್ಲ. ಅದ್ದರಿಂದ ಅಧಿಕಾರಕ್ಕೆ ಬಂದ ತಕ್ಷಣವೇ ಕಾಶ್ಮೀರಕ್ಕೆ ನೀಡಿದ್ದ 372 ವಿಶೇಷ ಸ್ಥಾನ ಮಾನ ರದ್ದು ಮಾಡಿದ್ದೇವೆ. ದಾರಿ ತಪ್ಪಿಲ್ಲ. ಗುರಿ ಮುಟ್ಟಿದ್ದೇವೆ. ರಾಷ್ಟ್ರದ ಅಭಿವೃದ್ದಿಯ ಚಿಂತನೆ, ಕುಟುಂಬ ರಾಜಕಾರಣ ಮಾಡಿಲ್ಲ ಎಂದ ಅವರು, ತಳಮಟ್ಟದಲ್ಲಿ ಪಕ್ಷಗಳನ್ನು ಕಟ್ಟುವ ದೃಷ್ಠಿಯಿಂದ ಪ್ರಕೋಷ್ಠಗಳ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಸಿದ್ದೇಶ್ವರ್, ಕರ್ನಾಟಕದಲ್ಲಿ ಮುಂದೆ ಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷ ಸಂಪೂರ್ಣವಾಗಿ ಬಹುಮತ ಬರಬೇಕು ಆ ನಿಟ್ಟಿನಲ್ಲಿ ಕಾರ್ಯಕರ್ತರು ಸನ್ನದ್ದರಾಗಬೇಕು. ಮುಂದೆ ಜಿಪಂ, ತಾಪಂ, ಗ್ರಾಮ ಪಂಚಾಯತ್ ಚುನಾವಣೆಗಳು ಬರಲಿವೆ. ಅದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ರೀತಿಯಲ್ಲಿ ಗೆಲವು ಸಾಧಿಸಬೇಕಿದೆ. ಕಾರ್ಯಕರ್ತರು ನಮ್ಮ ಶಕ್ತಿಯಾಗಿದ್ದಾರೆ ಎಂದರು. 

ಶಾಸಕ ರವೀಂದ್ರನಾಥ ಮಾತನಾಡಿ, ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಪಕ್ಷ ಸ್ಪಷ್ಟವಾಗಿ ಬಹುಮತ ಬರುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಮನವಿ ಮಾಡಿದರು. 

ಪ್ರಕೋಷ್ಠದ ಸಂಯೋಜಕ ಭಾನುಪ್ರಕಾಶ್ ಮಾತನಾಡಿ, ಸಮಾಜದ ಎಲ್ಲರನ್ನು ದೇಶದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರಕೋಷ್ಠಗಳ ಅಗತ್ಯವಿದೆ. ಈಗಾಗಲೇ 25 ಪ್ರಕೋಷ್ಠಗಳ ರಚನೆ ಮಾಡಲಾಗಿದೆ. ಮುಂದಿನ ದಿನಗಳ ಪ್ರಕೋಷ್ಠಗಳ ಮೂಲಕ ಹೆಚ್ಚಿನ ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಾಗುವುದು ಎಂದರು. 

ಸಭೆಯಲ್ಲಿ ಶಾಸಕರಾದ ಮಾಡಾಳ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಪ್ರೋ.ಲಿಂಗಣ್ಣ, ರೇಣುಕಾಚಾರ್ಯ, ಮೇಯರ್ ಅಜಯಕುಮಾರ್, ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ ಇದ್ದರು. ಜಿಲ್ಲಾ ಕಾರ್ಯದರ್ಶಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News