ಅಪರಾಧ ರಹಿತ ಕಾನೂನು ಸುವ್ಯವಸ್ಥೆ ಸರ್ಕಾರದ ಜವಬ್ದಾರಿ: ಸಿಎಂ ಯಡಿಯೂರಪ್ಪ

Update: 2020-11-24 17:54 GMT

ಮೈಸೂರು,ನ.24: ಸಮಾಜದಲ್ಲಿ ಸಾರ್ವಜನಿಕರು ಯಾವುದೇ ಭೀತಿಯಿಲ್ಲದೆ ಶಾಂತಿಯಿಂದ ನೆಲೆಸುವುದಕ್ಕೆ ಅಪರಾಧ ರಹಿತವಾದ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಮಂಗಳವಾರ ಮೈಸೂರು ನಗರದ ಪೊಲೀಸ್ ಆಯುಕ್ತರ ನೂತನ ಕಚೇರಿ ಹಾಗೂ ಪೊಲೀಸ್ ಗೃಹ-2020 ಯೋಜನೆಯಡಿ ನಿರ್ಮಿಸಿರುವ 108 ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಾಂತಿ ಕಾಪಾಡಲು ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ತರವಾಗಿದೆ. ಮೈಸೂರು ನಗರದ ಪೊಲೀಸರಿಂದ ಅತ್ಯಂತ ಜನಪರವಾದ, ಗುಣಾತ್ಮಕ, ವೃತ್ತಿಪರ, ಪಾರದರ್ಶಕ ಹಾಗೂ ಜವಬ್ದಾರಿಯುತವಾದ ಕೆಲಸವನ್ನು ಸರ್ಕಾರ ನಿರೀಕ್ಷಿಸುತ್ತಿದೆ ಎಂದರು.

ಮೈಸೂರು ನಗರ ಪೊಲೀಸರ ಕಾರ್ಯಕ್ಷಮತೆಯನ್ನು ವೃದ್ಧಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸುಸಜ್ಜಿತ ಹಾಗೂ ಮೂಲಭೂತ ಸೌಕರ್ಯದಿಂದ ಕೂಡಿದ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ನಿಗಮ ಮೂಲಕ ನೂತನವಾದ ಆಧುನಿಕ ವಿನ್ಯಾಸದ ವಸತಿ ಗೃಹವನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜ್ಯೋತಿ ನಗರದಲ್ಲಿ 36 ಹಾಗೂ ಜಾಕಿ ಕ್ವಾಟ್ರಾಸ್‍ನ 72 ವಸತಿ ಗೃಹಗಳು ಎಲ್ಲಾ ಮೂಲಭೂತ ಸೌಕರ್ಯದಿಂದ ಕೂಡಿದೆ. ಪೊಲೀಸ್ ಗೃಹ 2020 ಯೋಜನೆಯಡಿ ಈ ವಸತಿ ಸಮುಚ್ಚಯ ನಿರ್ಮಾಣಕ್ಕೆ 20.31 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.

ಪೊಲೀಸ್ ಗೃಹ-2025ನೇ ಯೋಜನೆಯಡಿ 184 ವಸತಿಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಾಲದಲ್ಲಿ ಪೊಲೀಸ್ ಸಿಬ್ಬಂದಿ ಅಧಿಕಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಪೊಲೀಸ್ ವಸತಿ ಗೃಹಗಳಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ನಿಯಂತ್ರಣದಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಹೆಚ್ಚಿನ ಜವಬ್ದಾರಿಯಿಂದ ಕಾರ್ಯನಿರ್ವಹಿಸಿರುವ ಪ್ರಶಂಸನಾ ಕಾರ್ಯವನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಕೊರೋನ ಸೋಂಕಿನ ಹರಡುವಿಕೆಯ ಸಂದರ್ಭದಲ್ಲಿ ಸಾರ್ವಜನಿಕರಿಕೆ ಅರಿವು ಮೂಡಿಸುವಲ್ಲಿ ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಮೈಸೂರು ನಗರ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ದೇಶದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಚರ್ಚಿಸಿದ್ದಾರೆ. ಇನ್ನೂ ನಾಲ್ಕೈದು ವಾರಗಳ ಕಾಲ ಕಟ್ಟೆಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆಯು ದೇಶದಲ್ಲಿ ಅತ್ಯಂತ ದಕ್ಷತೆ ಹಾಗೂ ನಿಷ್ಠೆಗೆ ಹೆಸರುವಾಸಿಯಾಗಿದೆ. ಅದರಂತೆ ಮೈಸೂರಿನಲ್ಲಿ ಇಲಾಖೆಯು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮೈಸೂರಿನ ಪೊಲೀಸ್ ಇಲಾಖೆಯು ಕೋವಿಡ್-19 ಹಿನ್ನೆಲೆ ಜಾರಿಯಾದ ಲಾಕ್‍ಡೌನ್ ಸಂದರ್ಭದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದೆ. ಅದರಂತೆ ಜಿಲ್ಲೆಯ ಜನರ ಸಹಕಾರವು ಉತ್ತಮವಾಗಿದೆ. ಇದರಿಂದಾಗಿ ಸಾಂಸ್ಕೃತಿಕ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿ ನಿರಂತರವಾಗಿ ನಡೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಎಸ್.ಟಿ.ಸೊಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಅಡಗೂರು ಎಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ಕೆ.ಮಹದೇವ್, ಎಲ್ ನಾಗೇಂದ್ರ, ಬಿ.ಹರ್ಷವರ್ಧನ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮೇಯರ್ ತಸ್ನೀಂ, ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಬಿ.ಸಿ.ಪರಿಮಳ ಶ್ಯಾಂ, ಸೇರಿದಂತೆ ಹಲವರು ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News