ಹೊಸ ಟೆಂಡರ್ ಕರೆದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎಂದ ಶಾಸಕ ಜಿ.ಟಿ.ದೇವೇಗೌಡ

Update: 2020-11-24 18:01 GMT

ಮೈಸೂರು,ನ.24: ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದಾದರೂ ಟೆಂಡರ್ ಕರೆದರೆ ನಾವೆಲ್ಲರೂ ಸೇರಿಕೊಂಡು ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಎಚ್ಚರಿಕೆ ನೀಡಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೆಲಸಗಳೇ ಆಗುತ್ತಿಲ್ಲ, ಹಳೆಯ ಕೆಲಸ ಮುಗಿಯುವವರೆಗೆ ಹೊಸ ಟೆಂಡರ್ ಕರೆದರೆ ಶಾಸಕರುಗಳಾದ ನಾವೆಲ್ಲರೂ ಸೇರಿಕೊಂಡು ನಿಮ್ಮನ್ನು ಕೊಂದು ಬಿಡುತ್ತೇವೆ ಎಂದು ಹರಿಹಾಯ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ರಸ್ತೆಗಳು ಒಳಚರಂಡಿ ಸೇರಿದಂತೆ ಹಲವು ಕೆಲಸಗಳು ನೆನಗುದಿಗೆ ಬಿದ್ದಿರುವ ಬಗ್ಗೆ ನಂಜನಗೂಡು ಶಾಸಕ ಹರ್ಷವರ್ಧನ್, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ರಾಷ್ಟ್ರೀಯ ಪ್ರಾಧಿಕಾರದ ಇಂಜಿನಿಯರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ಜಿ.ಟಿ.ದೇವೇಗೌಡ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ವರ್ಷಗಳಾದರೂ ರಸ್ತೆ ಪೂರ್ಣಗೊಂಡಿಲ್ಲ, ಇರುವ ರಸ್ತೆಯನ್ನು ಅಗೆದು ಹಾಕಲಾಗಿದೆ. ಅಲ್ಲಿನ ಜನ ದೂರವಾಣಿ ಕರೆ ಮಾಡಿ ನನ್ನ ಪ್ರಶ್ನೆ ಮಾಡುತ್ತಾರೆ. ದಯವಿಟ್ಟು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಇನ್ನು ಮುಂದೆ ಹೊಸ ಟೆಂಡರ್ ಕರೆಯಬೇಡಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News