ಬಾಬಾ ಬುಡನ್ ಗಿರಿ ಆವರಣದಲ್ಲಿ ಆಝಾನ್ ಆರೋಪ: ಪೊಲೀಸ್ ಠಾಣೆ ಎದುರು ಶ್ರೀರಾಮಸೇನೆ ದಿಢೀರ್ ಧರಣಿ

Update: 2020-11-24 18:17 GMT

ಚಿಕ್ಕಮಗಳೂರು, ನ.24: ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ಆವರಣದಲ್ಲಿ ಮುಸ್ಲಿಂ ಸಮುದಾಯದವರು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಆಝಾನ್ ಕೂಗುತ್ತಾ ನಮಾಝ್ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಗಿರಿ ಆವರಣದಲ್ಲಿನ ಮೈಕ್ ತೆರವುಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ಇನಾಂ ದತ್ತಾತ್ರೇಯ ಪೀಠ ಉಪ ಪೊಲೀಸ್ ಠಾಣೆ ಎದುರು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು.

ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ಆವರಣದಲ್ಲಿ 1975ರ ಧಾರ್ಮಿಕ ಆಚರಣೆಗಳ ಹೊರತಾಗಿ ಬೇರೆ ಯಾವುದೇ ಧಾರ್ಮಿಕರ ಆಚರಣೆಗಳನ್ನು ನಡೆಸಬಾರದೆಂದು ನ್ಯಾಯಾಲಯ ಈ ಹಿಂದೆಯೇ ಆದೇಶ ನೀಡಿದೆ. ಆದರೆ ಮುಸ್ಲಿಂ ಸಮುದಾಯದವರು ಕಳೆದ ಕೆಲ ವರ್ಷಗಳಿಂದ ಗಿರಿ ಆವರಣದಲ್ಲಿ ಮೈಕ್ ಮೂಲಕ ಆಝಾನ್ ಕೂಗುತ್ತಾ ನಮಾಝ್ ಮಾಡುತ್ತಿದ್ದಾರೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಜಿಲ್ಲಾಡಳಿತ ಕೂಡಲೇ ಮೈಕ್ ತೆಗೆಸಬೇಕು. ನಮಾಝ್ ಮಾಡಲು ಅವಕಾಶ ನೀಡಬಾರದೆಂದು ಪಟ್ಟು ಹಿಡಿದು ಠಾಣೆಯ ಎದುರು ಗಂಗಾಧರ್ ಕುಲಕರ್ಣಿ ಧರಣಿ ನಡೆಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಮುಜರಾಯಿ ಅಧಿಕಾರಿ ದರ್ಶನ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಸೈ ಗವಿರಾಜ್ ಮತ್ತು ಮುಜಾರಾಯಿ ತಹಶೀಲ್ದಾರ್, ಧರಣಿ ನಿರತರ ಮನವೊಲಿಸಿ ಆಝಾನ್ ಕೂಗಲು ಅಳವಡಿಸಿದ್ದ ಮೈಕ್ ಅನ್ನು ತೆರವುಗೊಳಿಸಿದ ನಮಾಝ್ ಮಾಡಲು ಅವಕಾಶ ನೀಡುವುದಿಲ್ಲವೆಂದು ಅಧಿಕಾರಿಗಳು ಭರವಸೆ ನೀಡಿದರು. ನಂತರ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

ಧರಣಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ತಾಲೂಕು ಅಧ್ಯಕ್ಷ ಪುನೀತ್, ಶರತ್, ಜ್ಞಾನೇಂದ್ರ, ನಿರಂಜನ್, ಅಭಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News