ನಾಡು-ನುಡಿಗಾಗಿ ಜೈಲಿಗೆ ಹೋಗಲು ಸಿದ್ಧನಿದ್ದೇನೆ: ವಾಟಾಳ್ ನಾಗರಾಜ್

Update: 2020-11-25 13:39 GMT

ಬೆಂಗಳೂರು, ನ.25: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‍ನ್ನು ವಿಫಲಗೊಳಿಸಲು ರಾಜ್ಯ ಸರಕಾರ ಹರಸಾಹಸ ನಡೆಸುತ್ತಿದೆ. ಆದರೆ, ನನ್ನನ್ನೂ ಒಳಗೊಂಡಂತೆ ಕನ್ನಡ ಕಾರ್ಯಕರ್ತರು ಜೈಲಿಗೆ ಹೋದರು ಚಿಂತೆಯಿಲ್ಲ. ರಾಜ್ಯ ಬಂದ್ ಮಾಡಿಯೇ ತೀರುತ್ತೇವೆಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಸಮುದಾಯ ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ರಾಜ್ಯ ಬಂದ್ ನಡೆಸುವುದು ಶತಸಿದ್ಧ. ಬಂದ್ ಸಂದರ್ಭದಲ್ಲಿ ಏನೇ ಅನಾಹುತವಾದರೂ ಅದಕ್ಕೆ ನಾವು ಹೊಣೆಗಾರರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಕ್ಕೆ, ರಾಜ್ಯದ ಜನತೆಯ ಸ್ವಾಭಿಮಾನದ ಬದುಕಿಗೆ ಧಕ್ಕೆಯಾದಾಗ ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ. ಕನ್ನಡ ನಾಡಿನಲ್ಲೇ ನಾವು ಎರಡನೇ ದರ್ಜೆಯ ಪ್ರಜೆಗಳಾಗುವ ಹಂತಕ್ಕೆ ಹೋಗುತ್ತಿದ್ದೇವೆ. ಇವೆಲ್ಲ ಸಮಸ್ಯೆಗಳನ್ನು ನಿವಾರಿಸಿ ಕನ್ನಡಿಗರ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕಾಗಿದೆ. ಹೀಗಾಗಿ ಡಿ.5ರ ರಾಜ್ಯಬಂದ್‍ಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಯಾರನ್ನು ಕೇಳಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈ ನಿಗಮ ಸ್ಥಾಪನೆಯಿಂದ ಮುಂದಿನ ದಿನಗಳಲ್ಲಿ 100-200 ನಿಗಮಗಳ ಸ್ಥಾಪನೆ ಮಾಡಬೇಕಾದ ಸಂದರ್ಭ ಎದುರಾಗಬಹುದು. ಇದರಿಂದ ರಾಜ್ಯದಲ್ಲಿ ಒಗ್ಗಟ್ಟಿಗೆ ಧಕ್ಕೆ ಆಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ಬದಲಿಗೆ. ಸಮಗ್ರ ಬಸವಕಲ್ಯಾಣ ಅಭಿವೃದ್ದಿಗೆ ಹಣ ನೀಡಲು ನಮ್ಮ ಅಭ್ಯಂತರವಿಲ್ಲ. ಕೇವಲ ರಾಜಕೀಯ ಸ್ವಾರ್ಥಹಿತಾಸಕ್ತಿಗಾಗಿ ನಿಗಮ, ಪ್ರಾಧಿಕಾರದ ಸ್ಥಾಪನೆಗೆ ಕನ್ನಡಪರ ಸಂಘಟನೆಗಳ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ಮಾಜಿ ವಿಧಾನಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ಸರಕಾರ ಕೂಡಲೇ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪನೆಯ ನಿರ್ಧಾರ ಕೈಬಿಡಬೇಕು. ಕನ್ನಡ ಚಳವಳಿಗಾರರನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರೋಲ್‍ಕಾಲ್ ನಾಯಕರು ಎಂದು ಕರೆದಿದ್ದಾರೆ. ಆದರೆ. ಅವರೇ ಸಚಿವ ಸ್ಥಾನಕ್ಕಾಗಿ ರೋಲ್‍ಕಾಲ್ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದೇ 16 ಶಾಸಕರ ರೋಲ್‍ಕಾಲ್‍ನಿಂದ ಅಲ್ಲವೆ ಎಂದು ಅವರು ಪ್ರಶ್ನಿಸಿದರು.

ಕನ್ನಡ ಚಳವಳಿ ನಾಯಕ ಸಾ.ರಾ.ಗೋವಿಂದು ಮಾತನಾಡಿ, ಯಾರ ಅಭಿಪ್ರಾಯವನ್ನೂ ಕೇಳದೆ ಚುನಾವಣೆಗೋಸ್ಕರ ತರಾತುರಿಯಲ್ಲಿ ಪ್ರಾಧಿಕಾರ ಘೋಷಣೆ ಮಾಡಲಾಗಿದೆ. ಕೂಡಲೇ ಈ ನಿರ್ಧಾರವನ್ನು ಸರಕಾರ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಕನ್ನಡಪರ ಸಂಘಟನೆಗಳು ರಾಜ್ಯ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ರಾಜ್ಯಬಂದ್ ಸಂಪೂರ್ಣ ಯಶಸ್ವಿಯಾಗಲಿದೆ. ಆ ದಿನ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಇರಲಿದೆ. ಓಲಾ, ಉಬರ್, ಆಟೋ ಚಾಲಕರ ಸಂಘಟನೆಗಳು ಸೇರಿದಂತೆ ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್‍ಗೆ ಬೆಂಬಲ ಸೂಚಿಸಿವೆ.
-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News