ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಮೂವರು ಸಹೋದರರು ಸೇರಿ ಐದು ಮಂದಿ ಮೃತ್ಯು

Update: 2020-11-25 13:55 GMT

ಚಿಕ್ಕಮಗಳೂರು, ನ.25: ಮದುವೆಗೆಂದು ಬಂದಿದ್ದ ಐವರು ಯುವಕರು ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ವಸ್ತಾರೆ ಸಮೀಪದ ಹಿರೇಕೆರೆಯಲ್ಲಿ ಬುಧವಾರ ವರದಿಯಾಗಿದೆ.

ಮೃತರನ್ನು ವಸ್ತಾರೆ ಸಮೀಪದ ಹಂಚರವಳ್ಳಿ ಗ್ರಾಮದ ಕೃಷ್ಣಮೂರ್ತಿ, ಕುಸುಮಾ ದಂಪತಿಯ ಮೂವರು ಮಕ್ಕಳಾದ ದಿಲೀಪ್ (24), ದೀಪಕ್ (25) ಮತ್ತು ಸುದೀಪ್ (23), ವಸ್ತಾರೆ ಗ್ರಾಮದ ಮಹೇಶ್ ಮತ್ತು ಇಂದ್ರ ದಂಪತಿಯ ಪುತ್ರ ಸಂದೀಪ್ (23) ಹಾಗೂ ಇದೇ ಗ್ರಾಮದ ರಘು ಎಂದು ಗುರುತಿಸಲಾಗಿದೆ.

ವಸ್ತಾರೆ ಗ್ರಾಮದ ಮಹೇಶ್ ಎಂಬವರ ಪುತ್ರಿಯ ವಿವಾಹ ನಡೆದಿತ್ತು. ವಿವಾಹದ ಬೀಗರ ಊಟವು ಮಂಗಳವಾರ ವಸ್ತಾರೆ ಗ್ರಾಮದಲ್ಲಿ  ನಡೆದಿತ್ತು. ಬುಧವಾರ ನವದಂಪತಿಯನ್ನು ವಸ್ತಾರೆಯಿಂದ ಬೇಲೂರಿಗೆ ಕಳುಹಿಸಿದ ನಂತರ ವಧುವಿನ ಇಬ್ಬರು ಸಹೋದರರಾದ ಸಂದೀಪ್ ಹಾಗೂ ರಘು ಎಂಬವರು ಹಂಚರವಳ್ಳಿ ಗ್ರಾಮದ ತಮ್ಮ ಸಂಬಂಧಿ ಕೃಷ್ಣಮೂರ್ತಿ, ಕುಸುಮಾ ದಂಪತಿಯ ಮೂವರು ಮಕ್ಕಳಾದ ದಿಲೀಪ್, ದೀಪಕ್ ಹಾಗೂ ಸುದೀಪ್ ಹಾಗೂ ಮತ್ತಿಬ್ಬರೊಂದಿಗೆ ವಸ್ತಾರೆ ಗ್ರಾಮದ ಹಿರೇಕೆರೆಗೆ ಈಜಲು ಹೋಗಿದ್ದರು ಎಂದು ತಿಳಿದುಬಂದಿದೆ.

ಹಿರೇಕೆರೆಯಲ್ಲಿ ತುಂಬಿದ್ದ ನೀರಿನ ಆಳ ಅರಿಯದೇ 7 ಮಂದಿ ನೀರಿಗೆ ಹಾರಿದ್ದಾರೆ. ನಂತರ ನೀರಿನಿಂದ ಮೇಲೆ ಬರಲಾಗದೇ ಮುಳುಗಲಾರಂಭಿಸಿದ್ದಾರೆ. ಈ ವೇಳೆ ಇಬ್ಬರು ಯುವಕರು ಈಜಿ ದಡ ಸೇರಿ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಕೆರೆ ಬಳಿಗೆ ಬರುವಷ್ಟರದಲ್ಲಿ ಕೆರೆಯಲ್ಲಿ ಮುಳುಗಿದ್ದ ಐವರು ನಾಪತ್ತೆಯಾಗಿದ್ದರು.

ಯುವಕರು ಕೆರೆಯಲ್ಲಿ ಮುಳುಗಿದ್ದಾರೆ ಎಂಬ ಸುದ್ದಿ ತಿಳಿದೊಡನೆ ಅಗ್ನಿಶಾಮಕ ದಳ ಸಿಬ್ಬಂದಿ ಬೋಟಿನೊಂದಿಗೆ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿ ಸಂಜೆ ವೇಳೆಗೆ ಎಲ್ಲಾ ಐವರು ಯುವಕರ ಮೃತದೇಹಗಳನ್ನು ಹೊರತೆಗೆಯಲಾಯಿತು.

ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಲಕನಿಗಾಗಿ ಕಾದುಕುಳಿತ ಶ್ವಾನ: ಮೃತ ಯುವಕರ ಪೈಕಿ ಸಂದೀಪ್ ಎಂಬಾತ ಡ್ಯಾನಿ ಹೆಸರಿನ ನಾಯಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದು, ತನ್ನ ಮಾಲಕ ಸಂದೀಪ್ ಈಜಲು ಕೆರೆಗೆ ತೆರಳಿದ್ದ ವೇಳೆ ಆತನೊಂದಿಗೆ ಶ್ವಾನವೂ ತೆರಳಿತ್ತು. ಆದರೆ ಸಂದೀಪ್ ಕೆರೆಗಿಳಿದವನು ಮತ್ತೆ ಮೇಲೆ ಬಾರದ ಪರಿಣಾಮ ಆ ಶ್ವಾನ ಕೆರೆ ದಡದಲ್ಲೇ ಕಾದು ಕುಳಿತಿದ್ದ ದೃಶ್ಯವೂ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News