ರಾಜ್ಯಕ್ಕೆ 800 ಕೋಟಿ ರೂ.ಹೆಚ್ಚುವರಿ ನೆರವು: ಸಚಿವ ಕೆ.ಎಸ್.ಈಶ್ವರಪ್ಪ

Update: 2020-11-25 13:37 GMT

ಬೆಂಗಳೂರು, ನ. 25: ಉದ್ಯೋಗ ಖಾತರಿ ಯೋಜನೆಯಡಿ ಒಟ್ಟು 13 ಕೋಟಿ ಮಾನವ ದಿನಗಳ ಸೃಷ್ಟಿಸುವ ಗುರಿ ನಿಗದಿ ಮಾಡಿದ್ದು, 2 ಕೋಟಿ ಮಾನವ ದಿನಗಳ ಸೃಜನೆಗೆ ಕೇಂದ್ರ ಸರಕಾರ ಹೆಚ್ಚುವರಿಯಾಗಿ 800 ಕೋಟಿ ರೂ.ಅನುದಾನ ನೀಡುವ ಎಂದು ಭರವಸೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ 2020-21ನೆ ಸಾಲಿಗೆ ನರೇಗಾ ಯೋಜನೆಯಡಿ ಒಟ್ಟು 13 ಕೋಟಿ ಮಾನವದಿನಗಳನ್ನು ಗುರಿಯಾಗಿ ನಿಗದಿಪಡಿಸಿದ್ದು ಇಲ್ಲಿಯವರೆಗೂ ಇಲಾಖೆ 10.50 ಕೋಟಿ ಮಾನವದಿನಗಳನ್ನು ಸೃಷ್ಟಿಸಿದ್ದು, ಅತ್ಯುತ್ತಮ ಸಾಧನೆ ಮಾಡಿರುವುದನ್ನು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

2021ಕ್ಕೆ 13 ಕೋಟಿ ಮಾನವ ದಿನಗಳ ಸೃಜನೆ ಗುರಿ ಸಾಧಿಸುವ ಭರವಸೆಯಿದ್ದು, ಹೆಚ್ಚುವರಿಯಾಗಿ 2 ಕೋಟಿ ಮಾನವದಿನಗಳನ್ನು ಅಂದರೆ ಸುಮಾರು 800 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ದಿಲ್ಲಿ ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು 1,200 ಕೋಟಿ ರೂ.ಗಳು ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗಾವಕಾಶ ಸಿಗಲಿವೆ ಎಂದ ಅವರು, ನರೇಗಾ ಯೋಜನೆಯಡಿ ಮಟೀರಿಯಲ್ ಬಿಲ್ ಬಾಕಿ 1,119 ಕೋಟಿ ರೂ.ಗಳನ್ನು ಪಾವತಿಸುವಂತೆ ರಾಜ್ಯ ಸರಕಾರವು ಕೋರಿದೆ. ಹಣಬಳಕೆ ಪ್ರಮಾಣ ಪತ್ರವನ್ನು ಒದಗಿಸಿದ ತಕ್ಷಣವೇ ಈ ಹಣವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಅಲ್ಲದೆ, ಶ್ಯಾಮಪ್ರಸಾದ್ ಮುಖರ್ಜಿ ಆರ್-ಅರ್ಬನ್ ಮಿಷನ್ ನೋಜನೆಯಡಿ ಹೆಚ್ಚುವರಿ 90 ಕ್ಲಸ್ಟರ್ ಅನ್ನು ಮಂಜೂರು ಮಾಡುವಂತೆ ಕೋರಿ ರಾಜ್ಯ ಸರಕಾರವು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ರಾಜ್ಯದ ಈ ಕೋರಿಕೆಯನ್ನು ಪರಿಗಣಿಸಲಾಗುವುದೆಂದು ಸಚಿವರು ತಿಳಿಸಿದ್ದು, ಇದರಿಂದ, 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಲಿದೆ ಎಂದು ಈಶ್ವರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News