"ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಬೇಕಿತ್ತು, ಈಗ ನಮ್ಮ ಅವಶ್ಯಕತೆ ಅವರಿಗಿಲ್ಲ"

Update: 2020-11-25 14:28 GMT

ಮೈಸೂರು,ನ.25: ಯಡಿಯೂರಪ್ಪ ಮುಖ್ಯಮಂತ್ರಿ ಆಗುವಾಗ ನನ್ನ ಪಾತ್ರ ಬೇಕಿತ್ತು. ಈಗ ನಮ್ಮ ಅವಶ್ಯಕತೆ ಅವರಿಗಿಲ್ಲ, ನಾವು ನೋಡಿಕೊಳ್ಳುತ್ತೀವಿ ಬಿಡಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ದೊಡ್ಡಮ್ಮತಾಯಿ ದೇವಸ್ಥಾನ ಸಮಾರಂಭದಲ್ಲಿ  ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದರು. "ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಆರಾಮಾಗಿ ಇದ್ದಾರೆ. ನೋಡ್ಕೋತೀವಿ ಬಿಡಿ" ಎಂದು ಅವರು ಹೇಳಿದರು.

ಸಂಸದ ವಿ.ಶ್ರೀನಿವಾಸಪ್ರಸಾದ್ ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಆರೋಪ ಮಾಡಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ವಿ.ಶ್ರೀನಿವಾಸಪ್ರಸಾದ್, ಧ್ರುವನಾರಾಯಣ್ ನನ್ನ ಉಗುರಿಗೂ ಸಮಾನನಲ್ಲ, ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಪಕ್ಷದ ಮುಖಂಡರೆ ಅವನಿಗೆ ಕಿಮ್ಮತ್ತಿಲ್ಲ ಎಂದು ಹೇಳುತ್ತಿದ್ದರು. ಬಾಲಿಷ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ನಿಧನ ಹಿನ್ನಲೆ ಸಂತಾಪ ಸೂಚಿಸಿದ ಅವರು, ಧೀರ್ಘಕಾಲದ ರಾಜಕಾರಣ ಮಾಡಿದ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಅವರ ನಿಧನ ಸುದ್ದಿ ಆಘಾತ ತಂದಿದೆ. ಕಾಂಗ್ರೆಸ್‍ನಲ್ಲಿ ಉತ್ತಮ ನಾಯಕರಾಗಿದ್ದರು. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಹೇಳಿದರು.

ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಬೇಕು ಎಂಬ ಶಾಸಕ ಹರ್ಷವರ್ಧನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನವನ್ನು ನಾನೇ ಬೇಡ ಎಂದಿದ್ದೇನೆ, ಚುನಾವಣೆಯೇ ಬೇಡ ಎಂದಿದ್ದವನು ನಾನು, ಇನ್ನು ಮಂತ್ರಿ ಪಟ್ಟ ಯಾಕೆ ಬೇಕು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News