"ಆರು ಸಾವಿರ ಕೋಟಿ ರೂಪಾಯಿ ಅಂದ್ರು, ಆರು ರೂಪಾಯಿ ಕೊಡಲಿಲ್ಲ"

Update: 2020-11-25 14:52 GMT

ಶಿವಮೊಗ್ಗ: ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣ ಬೇಡ ಎಂದು ಸಂಸದ ಬಿ.ವೈ ರಾಘವೇಂದ್ರ ಅವರ ಮನೆ, ಕಚೇರಿ, ದೆಹಲಿಯ ಕಛೇರಿಗೆಲ್ಲ ಭೇಟಿ ನೀಡಿ, 400 ಪುಟಗಳ ಮನವಿ ಕೊಟ್ಟಿದಾಯ್ತು, ಯಾವುದೇ ಪ್ರಯೋಜನವಾಗಲಿಲ್ಲ. ಕೇಂದ್ರ ಸಚಿವರನ್ನು ಕರೆಯಿಸಿ, ಆರು ಸಾವಿರ ಕೋಟಿ ರೂ ಹೂಡಿಕೆ ಮಾಡುವುದಾಗಿ ಭರವಸೆ  ಕೊಡಿಸಿದ್ದರು. ಆದರೆ ಆರು ರೂಪಾಯಿ ಬಂದಿಲ್ಲ ಎಂದು ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ,ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,2016ರಲ್ಲಿ ಅಂದಿನ ಸಂಸದ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ವಿಐಎಸ್‌ಎಲ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರ ಕಬ್ಬಿಣದ ಅದಿರಿನ ಗಣಿ ಮಂಜೂರು ಮಾಡಿದ್ದಲ್ಲಿ ಕೇಂದ್ರ ಸರ್ಕಾರದಿಂದ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ದಿಪಡಿಸುವುದಾಗಿ ಭರವಸೆ ನೀಡಿದ್ದು, ಈ ಭರವಸೆಯು ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭದ್ರಾವತಿ ಜನತೆಗೆ ನೀಡಿದ್ದ ವಾಗ್ದಾನವನ್ನು ಮರೆತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ನೀತಿಯಂತೆ ಖಾಸಗಿಯವರಿಗೆ ಮಾರಾಟ ಮಾಡಿ ಅಭಿವೃದ್ದಿಪಡಿಸುವುದಾಗಿ ವರಸೆ ಬದಲಾಯಿಸಿದ್ದಾರೆಂದು ಅವರು ಹೇಳಿದರು. 

ಭಾರತೀಯ ಉಕ್ಕು ಪ್ರಾಧಿಕಾರದ ಉದ್ಯಮ ವಿಐಎಸ್‌ಎಲ್‌ನ್ನು ಖಾಸಗೀ ಬಂಡವಾಳದಾರರಿಗೆ ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನಂತೆ 2016ರ ಸೆಪ್ಟಂಬರ್ ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2019ರ ಜುಲೈ 4ರಂದು ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮಾರಾಟ ಮಾಡಲು ಆಸಕ್ತಿದಾರ ಖರೀದಿದಾರರನ್ನು ಹುಡುಕಲು ಜಾಗತಿಕ ಟೆಂಡರ್ ಪ್ರಕಟಣೆ ಹೊರಡಿಸಿತ್ತು. 2020ರ ಸೆಪ್ಟಂಬರ್ 21ರಂದು ಕೇಂದ್ರ ಉಕ್ಕು ಸಚಿವ ಧರ್ಮೇಂದ್ರ ಪ್ರದಾನ್ ಅವರು ವಿಐಎಸ್‌ಎಲ್ ಖರೀದಿಸಲು ಖಾಸಗಿ ಮಾಲೀಕರು ಆಸಕ್ತಿ ತೋರಿದ್ದಾರೆಂದು ಸಂಸತ್ ಅಧಿವೇಶನದಲ್ಲಿ ಉತ್ತರಿಸಿದ್ದಾರೆ ಎಂದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಖಾನೆಗೆ 2011ರಲ್ಲಿ ಸೊಂಡುರು ತಾಲ್ಲೂಕಿನ ಎನ್‌ಇಬಿ ರೇಂಜಿನಲ್ಲಿ 140 ಹೆಕ್ಟೇರ್ ಹಾಗೂ ರಮಣದುರ್ಗ ಪ್ರದೇಶದಲ್ಲಿ ೧೫೦ ಎಕರೆ ಕಬ್ಬಿಣದ ಅದಿರಿನ ಗಣಿ ಮಂಜೂರು ಮಾಡಿ ರಾಜ್ಯಪತ್ರ ಆದೇಶ ಹೊರಡಿಸಿದ್ದರೂ ಸಹ ಕಾರ್ಖಾನೆ ಅಭಿವೃದ್ದಿಯಾಗಿಲ್ಲ ಎಂದರು.

ಖಾಸಗೀಕರಣದಿಂದ ಕಾರ್ಖಾನೆ ಶಾಶ್ವತವಾಗಿ ನಶಿಸಿ ಹೋಗಲಿದ್ದು ಇದನ್ನೇ ನಂಬಿರುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿದ್ದ ವಸತಿ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಿತರಣೆ ಮಾಡಿದ್ದು, ಇಂದು ಖಾಸಗೀಕರಣದ ನೆಪ ಹೇಳಿ ಮನೆ ಖಾಲಿ ಮಾಡಿಸಿ ಎಲ್ಲರನ್ನು ಬೀದಿಪಾಲು ಮಾಡಲು ಕಾರ್ಖಾನೆ ಆಡಳಿತ ಮಂಡಳಿ ಹೊರಟಿದೆ ಎಂದು ಆರೋಪಿಸಿದರು.

ಕಾರ್ಖಾನೆ ಅಭಿವೃದ್ದಿ ನೆಪದಲ್ಲಿ ಖಾಸಗಿ ಬಂಡವಾಳದಾರರಿಗೆ ಬಿಡಿಗಾಸಿಗೆ ಮಾರಾಟ ಮಾಡಿ  ಭದ್ರಾವತಿಯ ಸಾರ್ವಜನಿಕ ಆಸ್ತಿಯನ್ನು ಒಬ್ಬ ಮಾಲಕನಿಗೆ ವರ್ಗಾಯಿಸಲು ಒಳ ಒಪ್ಪಂದವಾಗಿರುವುದು ಭದ್ರಾವತಿ ನಗರಕ್ಕೆ ಅತ್ಯಂತ ಮಾರಕ ಸಂಗತಿಯಾಗಿದೆ ಎಂದರು.

ಕಾರ್ಖಾನೆಯ ಅಭಿವೃದ್ದಿಗೆ ಹಾಗೂ ಉಳಿಸಿಕೊಳ್ಳಲು 22 ಬಾರಿ ದೆಹಲಿ ಹೋಗಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಇಚ್ಚಾಸಕ್ತಿ ಇದ್ದರೆ ಮಾತ್ರ ಕಾರ್ಖಾನೆ ಉಳಿಯುತ್ತದೆ. ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಬೇಕು ಎಂದರು.

ಭದ್ರಾವತಿ ನಗರಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಪಕ್ಷಾತೀತವಾಗಿ ಕಾರ್ಖಾನೆ ರಕ್ಷಿಸಲು, ಕಾರ್ಮಿಕರ ಮತ್ತು ಗುತ್ತಿಗೆ ಕಾರ್ಮಿಕರ, ನಿವೃತ್ತ ಕಾರ್ಮಿಕರ, ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ರಚನೆಯಾಗಿದ್ದು, ನಮ್ಮ ಬೇಡಿಕೆ ಈಡೇರಿಸುವಂತೆ ಸಂಸದರನ್ನು ಎಚ್ಚರಗೊಳಿಸಲು ನ.28 ರಂದು ಸಮಿತಿಯಿಂದ ಭದ್ರಾವತಿಯ ಎಲ್ಲ ಪ್ರಮುಖರ ನಿಯೋಗ ಶಿವಮೊಗ್ಗದಲ್ಲಿ ಸಂಸದರನ್ನು ಭೇಟಿ ಮಾಡಲಿದ್ದು, ಅವರ ಪ್ರತಿಕ್ರಿಯೆ ಆಧರಿಸಿ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಜಗದೀಶ್, ಜಿ.ಪಂ.ಸದಸ್ಯ ಮಣಿಶೇಖರ್, ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ಅಧ್ಯಕ್ಷ ಕರುಣಾ ಮೂರ್ತಿ, ಗುತ್ತಿಗೆ ಕಾರ್ಮಿಕರ ಸಂಘದ ಸುರೇಶ್, ಆಮ್ ಆದ್ಮಿ ಪಕ್ಷದ ರವಿ, ಸುರೇಶ್, ಕೆಂಪಯ್ಯ, ನರಸಿಂಹಾಚಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News