‘ಸರಕಾರ ರಚನೆಯಲ್ಲಿ ಯಾರ ಪಾತ್ರ ದೊಡ್ಡದು’: ಬಿಜೆಪಿ ಮುಖಂಡರ ಮಧ್ಯೆ ಜಟಾಪಟಿ

Update: 2020-11-25 17:51 GMT

ಬೆಂಗಳೂರು, ನ. 25: ಸಚಿವ ಸಂಪುಟ ವಿಸ್ತರಣೆಗೆ ಕೆಲ ಶಾಸಕರು ಪಟ್ಟು ಹಿಡಿದು ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ತೀವ್ರ ತಲೆನೋವು ತಂದಿಟ್ಟಿದೆ.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆಗೆ ನಮ್ಮ ಪಾತ್ರ ದೊಡ್ಡದು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ, ‘ಬಿಜೆಪಿಯ 105 ಮಂದಿ ಶಾಸಕರು ಇಲ್ಲದಿದ್ದರೆ ಸರಕಾರ ರಚನೆಯೇ ಆಗುತ್ತಿರಲಿಲ್ಲ’ ಎಂದು ಗುಡುಗಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್, '105 ಶಾಸಕರು ಇದ್ದರೂ ಬಿಜೆಪಿಗೆ ಏಕೆ ಸರಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ' ಎಂದು ಪ್ರಶ್ನಿಸಿದರು. ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಈ ಬಗ್ಗೆ ಸಿಎಂ ತೀರ್ಮಾನ ಮಾಡಲಿದ್ದಾರೆ ಎಂದರು.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಬಿಜೆಪಿಯ 105 ಶಾಸಕರು ಇರುವುದರಿಂದಲೇ ಸರಕಾರ ಅಧಿಕಾರಕ್ಕೆ ಬಂದಿದೆ. 17 ಶಾಸಕರ ಬಗ್ಗೆ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಆದರೆ, 105 ಜನ ಇಲ್ಲದಿದ್ದರೆ ಸರಕಾರ ಬರುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ಯಾರೂ ನಮ್ಮಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿಕೊಳ್ಳಬಾರದು. 105 ಶಾಸಕರು ಮೊದಲು, ನಂತರ ಉಳಿದವರು ಎಂದು ಹೇಳಿರುವ ರೇಣುಕಾಚಾರ್ಯ, ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News