ಶೀಘ್ರದಲ್ಲೆ ಸಿಗಂದೂರು ಉಳಿಸಿ ಬೃಹತ್ ಹೋರಾಟ: ಬೇಳೂರು ಗೋಪಾಲಕೃಷ್ಣ

Update: 2020-11-26 09:56 GMT

ಶಿವಮೊಗ್ಗ, ನ.26: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸರಕಾರ ರಚಿಸಿರುವ ಸಲಹಾ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶೀಘ್ರದಲ್ಲೇ ಪಕ್ಷಾತೀತವಾಗಿ, ಜ್ಯಾತ್ಯತೀತವಾಗಿ ಬೃಹತ್  ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಗಂದೂರು ಉಳಿಸಿ ಹೋರಾಟ ಸಮಿತಿ ಉಪಾಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಸರಕಾರ ಹಠಮಾರಿ ನಿಲುವು ತೆಗೆದುಕೊಳ್ಳುತ್ತಿದೆ. ಕಾಣದ ಕೈಗಳು ಸಿಗಂದೂರು ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಹುನ್ನಾರಕ್ಕೆ ಕೈ ಹಾಕಿವೆ. ಇದನ್ನು  ಸಿಗಂದೂರು ಉಳಿಸಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಶೀಘ್ರದಲ್ಲೇ ಹೋರಾಟದ ದಿನಾಂಕವನ್ನು ನಿಗದಿಪಡಿಸಲಾಗುವುದು. ಸಿಗಂದೂರು ಉಳಿಸಿ ಹೋರಾಟಕ್ಕೆ ದೇವಾಂಗ, ಸಾಧು ಶೆಟ್ಟಿ, ಉಪ್ಪಾರ, ಕುರುಬ, ಒಕ್ಕಲಿಗ, ಯಾದವ, ಮಡಿವಾಳ, ತಮಿಳು ಸಮಾಜ, ಬೋವಿ, ಸವಿತಾ ಸಮಾಜ, ಗಂಗಾಮತ, ವಿಶ್ವಕರ್ಮ ಸಮಾಜಗಳು ಬೆಂಬಲ ನೀಡಿವೆ. ಹೋರಾಟದ ಸಿದ್ದತೆ ಬಗ್ಗೆ ಈಗಾಗಲೇ ಎಲ್ಲಾ ಸಮಾಜದ ಮುಖಂಡರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆಸಿ, ಹೋರಾಟ ದಿನಾಂಕ ನಿಗಧಿಪಡಿಸಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು.

ಯಡಿಯೂರಪ್ಪ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಿಗಂದೂರು ದೇವಸ್ಥಾನ, ರಸ್ತೆ ಅಭಿವೃದ್ದಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಈಗ ಅಲ್ಲಿ ಅರಣ್ಯ ಒತ್ತುವರಿಯಾಗಿದೆ ಅಂತ ಹೇಳುತ್ತಿದ್ದಾರೆ. ಅಭಿವೃದ್ದಿಗೆ ಅನುದಾನ ಕೊಡುವಾಗ ಇದು ಅರಣ್ಯ ಜಾಗ ಎಂದು ನೆನಪಿರಲಿಲ್ವ, ಅಧಿಕಾರಿಗಳು ಏನು ದನ ಕಾಯುತ್ತಿದ್ದರಾ ಬೇಳೂರು ಗೋಪಾಲಕೃಷ್ಣ ಎಂದು ಪ್ರಶ್ನಿಸಿದರು.

ಯಡಿಯೂರಪ್ಪರದು ದೈವಿಭಕ್ತ ಕುಟುಂಬ. ದೇವರನ್ನು ನಂಬುವ ಯಡಿಯೂರಪ್ಪನವರು ಶಕ್ತಿ ದೇವತೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ವಿಚಾರದಲ್ಲಿ ಕೈ ಹಾಕಿದ್ದಾರೆ. ದೈವಿಯ ಶಾಪ ಅವರಿಗೆ ತಟ್ಟೇ ತಟ್ಟುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ಸಿಗಂದೂರು ದೇವಸ್ಥಾನ ಹಿಂದುಳಿದ ವರ್ಗದವರ ದೇವಸ್ಥಾನ.  ಸರಕಾರ ಸಿಗಂದೂರು ದೇವಸ್ಥಾನದ ವಿಚಾರದಲ್ಲಿ ಯಾಕೆ ಮೂಗು ತೂರಿಸುತ್ತಿದೆ ಎಂದು ತಿಳಿಯುತ್ತಿಲ್ಲ? ಸರಕಾರ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಿರುವ ಸಲಹಾ ಸಮಿತಿ, ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಗಂದೂರು ಉಳಿಸಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಘೋಷಣೆ ಮಾಡಿದರು.

ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್ ಮಾತನಾಡಿ, ಜಿಲ್ಲೆಯ ಹಂದಿಗೋಡು ಸಮಸ್ಯೆಯ ವಿಚಾರವಾಗಿ ಸಮಿತಿ ರಚನೆ ಮಾಡಿ ಎಂದು ಮನವಿ ಮಾಡಿದರೂ ಒಪ್ಪದ ಸರಕಾರ ಸಿಗಂದೂರು ದೇವಾಲಯ ವಿಚಾರವಾಗಿ ಸಮಿತಿ ರಚನೆ ಮಾಡಿರುವುದು ಖಂಡನೀಯ ಎಂದರು.

ಸಿಗಂದೂರು ದೇವಸ್ಥಾನ ಟ್ರಸ್ಟಿನ ಹಣದ ಲೆಕ್ಕ ಕೇಳುವ ಸರಕಾರ, ಮುಖ್ಯಮಂತ್ರಿಗಳ ಕುಟುಂಬದ ಒಡೆತನದ ಪ್ರೇರಣಾ ಟ್ರಸ್ಟಿನ ಲೆಕ್ಕವನ್ನು ಕೊಡಿ ಎಂದು ಆಗ್ರಹಿಸಿದ ಅವರು, ದೇವಸ್ಥಾನದ ವಿಚಾರವಾಗಿ ಸರಕಾರ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಗಂದೂರು ಉಳಿಸಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಶ್ರೀಧರ್ ಹುಲ್ತಿಕೊಪ್ಪ, ಉಪಾಧ್ಯಕ್ಷರಾದ  ಎಂ.ಶ್ರೀಕಾಂತ್, ಎಂ.ಗುರುಮೂರ್ತಿ, ಸಂಚಾಲಕರಾದ ಎಸ್.ರವಿ ಕುಮಾರ್, ಗೀತಾಂಜಲಿ ರತ್ನಾಕರ್, ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News