ವಿಧಾನಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಪತ್ರ

Update: 2020-11-26 12:10 GMT
ಪ್ರತಾಪ್‍ ಚಂದ್ರ ಶೆಟ್ಟಿ

ಬೆಂಗಳೂರು, ನ.26: ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ವಶಪಡಿಸಿಕೊಳ್ಳಲು ತಂತ್ರ ರೂಪಿಸಿದ್ದ ಬಿಜೆಪಿ ಇದೀಗ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸೂಚನೆಯನ್ನು ನೀಡಿದೆ.

ಶಾಸಕಾಂಗದ ಕರ್ತವ್ಯ ನಿರ್ವಹಣೆಯಲ್ಲಿ ಪಕ್ಷಪಾತಿಯಾಗಿದ್ದು, ಈ ಮೂಲಕ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿರುತ್ತಾರೆ ಎಂಬ ಕಾರಣ ನೀಡಿ ಹಾಲಿ ವಿಧಾನ ಪರಿಷತ್ ಸಭಾಪತಿ ಹಾಗೂ ಕಾಂಗ್ರೆಸ್ ಸದಸ್ಯ ಪ್ರತಾಪ್‍ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

2018ರ ಡಿ.12 ರಿಂದ ರಾಜ್ಯ ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪ್‍ ಚಂದ್ರ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ 75 ಸದಸ್ಯರ ವಿಧಾನ ಪರಿಷತ್‍ನಲ್ಲಿ ಎಲ್ಲಾ ಸ್ಥಾನಗಳೂ ಭರ್ತಿಯಾಗಿವೆ. ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಸದ್ಯ 31 ಸದಸ್ಯರ ಬಲ ಹೊಂದಿರುವ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲು ಒಟ್ಟು 38 ಸ್ಥಾನಗಳ ಅಗತ್ಯವಿದೆ.

ಅವಿಶ್ವಾಸ ನಿರ್ಣಯ ಗೆಲ್ಲಲು ಬಿಜೆಪಿಗೆ ಇನ್ನೂ 7 ಮತಗಳ ಕೊರತೆ ಎದುರಾಗಲಿದೆ. ಸದ್ಯ ಕಾಂಗ್ರೆಸ್ ಸದಸ್ಯರು 29 ಮಂದಿ ಇದ್ದಾರೆ. ಜೆಡಿಎಸ್ ಸದ್ಯ 14 ಸದಸ್ಯರನ್ನು ಹೊಂದಿದ್ದು, ಪರಿಷತ್‍ನಲ್ಲಿ ಜೆಡಿಎಸ್ ಯಾರ ಕಡೆ ನಿಲ್ಲಲಿದೆ ಎನ್ನುವುದರ ಮೇಲೆ ಅವಿಶ್ವಾಸ ನಿರ್ಣಯದ ಗೆಲುವು-ಸೋಲು ನಿರ್ಧಾರವಾಗಲಿದೆ.

ಡಿ.7 ರಿಂದ 15ರವರೆಗೆ ನಡೆಯುವ ವಿಧಾನ ಮಂಡಲ ಅಧಿವೇಶನ ಸಂದರ್ಭ ಈ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಚರ್ಚೆಗೆ ಬರಲಿದೆ. ಬಿಜೆಪಿ ಸದಸ್ಯರು ಹಲವರು ಸಹಿ ಮಾಡಿ ಪರಿಷತ್ ಕಾರ್ಯದರ್ಶಿಗಳಿಗೆ ಈ ಪತ್ರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News