ಬಳ್ಳಾರಿ ಬೆನ್ನಲ್ಲೇ ಬೆಳಗಾವಿ ವಿಭಜನೆ ಕೂಗು: ಜಿಲ್ಲೆಯನ್ನು ಮೂರು ಭಾಗ ಮಾಡಬೇಕು ಎಂದ ಕಾಂಗ್ರೆಸ್ ನಾಯಕ

Update: 2020-11-26 13:01 GMT

ಬೆಂಗಳೂರು, ನ.26: ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದ ಮಾದರಿಯಲ್ಲಿಯೇ ಬೆಳಗಾವಿ ಜಿಲ್ಲೆಯನ್ನೂ ವಿಭಜನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವು ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಮಾಡಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ, ಗೋಕಾಕ್, ಬೆಳವಾಗಿ ಎಂದು ಮೂರು ಜಿಲ್ಲೆಗಳನ್ನು ಮಾಡಿ. ಅದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೃಹತ್ ಜಿಲ್ಲೆ. ಹಿಂದೆ ಧಾರವಾಡ ಜಿಲ್ಲೆಯನ್ನು ಹೇಗೆ ವಿಭಜನೆ ಮಾಡಲಾಯಿತೋ ಹಾಗೇ ಮಾಡಲಿ. ಈ ಹಿಂದೆಯೂ ಈ ಬಗ್ಗೆ ನಾನು ಸಹ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಒಳ್ಳೆಯದು ಎಂದ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಸ್ಪರ್ಧೆ ಆಸಕ್ತಿಯಿಲ್ಲ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದು, ರಾಜ್ಯದಲ್ಲಿ ಇನ್ನೂ ಬೇರೆ ಬೇರೆ ಕೆಲಸ ಮಾಡಬೇಕಿದೆ. ಹೀಗಾಗಿ ಲೋಕಲ್ ರಾಜಕಾರಣದಲ್ಲಿ ಹೆಚ್ಚು ಇಂಟ್ರೆಸ್ಟ್ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿಯಿಂದ ಅನಿಲ್‍ಲಾಡ್ ಸ್ಪರ್ಧೆಗೆ ಟಿಕೆಟ್ ಕೇಳಿಲ್ಲ. ಅವರು ಸ್ಪರ್ಧೆ ಮಾಡಬೇಕು ಎಂದಾದರೆ ಆಸಕ್ತಿ ತೋರಿಸಬೇಕಾಗಿದೆ ಅಲ್ಲವಾ? ವೈಯಕ್ತಿಕವಾಗಿ ನಾನು ನಿಲ್ಲಲು ಆಸಕ್ತಿಯಿದೆ ಎಂದು ಯಾರೂ ಮುಂದೆ ಬಂದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧವೆಂದು ಎಲ್ಲರೂ ಹೇಳಿದ್ದಾರೆ. ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಟಿಕೆಟ್ ಕೇಳಿದ್ದ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬೆಳಗಾವಿ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂಬಂಧ ಮತ್ತೆ ಸಭೆ ಮಾಡಲಾಗುವುದು. ಅಂತಿಮವಾಗಿ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಡಿಸೆಂಬರ್ ಮೊದಲ ವಾರದಲ್ಲಿ ಕೆಪಿಸಿಸಿಗೆ ಶಿಫಾರಸು ಮಾಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಯಾವಾಗ ಬೇಕಾದರೂ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು. ಮಸ್ಕಿ ವಿಧಾನಸಭೆ ಉಪಚುನಾವಣೆಗೆ ನಮ್ಮ ಅಭ್ಯರ್ಥಿ ತುರವಿಹಾಳ ಸಮರ್ಥರಿದ್ದಾರೆ ಎಂದರು.

ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಟಿಕೆಟ್ ಅವರಿಗೆ ಕೊಡ್ತೀವಿ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅಲ್ಲಿ ಲಿಂಗಾಯತರು ಬಹುಸಂಖ್ಯಾತರಿದ್ದಾರೆ, ಎಸ್ಸಿ ಎಸ್ಟಿ, ಕುರುಬ ಸಮುದಾಯದವರೂ ಇದ್ದಾರೆ. ಹೀಗಾಗಿ ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದರು.

ಬಂದ್‍ಗೆ ಬೆಂಬಲವಿಲ್ಲ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಕನ್ನಡ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇಲ್ಲ. ಮರಾಠ ಸಮುದಾಯ ಅಭಿವೃದ್ಧಿ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ರಾಜಕೀಯ ಲಾಭಕ್ಕಾಗಿ ನಿಗಮ ಮಾಡುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ. ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟು ನಿಗಮ ಸ್ಥಾಪಿಸಬೇಕಿತ್ತು. ಈಗ ಉಪಚುನಾವಣೆ ವೇಳೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಬಜೆಟ್‍ನಲ್ಲಿ ನಿಗಮ ಘೋಷಿಸಿದರೆ ಸ್ಪಷ್ಟವಾಗುತ್ತೆ. ಬೇರೆ ಯೋಜನೆಗಳಿಗೆ ಕೊಡಲು ಸರಕಾರದ ಬಳಿ ಹಣವಿಲ್ಲ. ನಿಗಮಗಳಿಗೆ ಹಣ ಎಲ್ಲಿಂದ ಕೊಡ್ತೀರಾ ಎಂಬುದು ನಮ್ಮ ಪ್ರಶ್ನೆ ಎಂದರು. ಬಿಜೆಪಿಯಲ್ಲಿ ಯಾರು ಮಂತ್ರಿ ಆಗ್ತಾರೆ, ಸಿಎಂ ಆಗ್ತಾರೆ ಅದು ನಮಗೆ ಸಂಬಂಧಿಸಿದ ವಿಷಯವಲ್ಲ. ನಮಗೆ ಪಕ್ಷ ಕಟ್ಟಬೇಕಿದೆ. ನಮ್ಮ ಪಕ್ಷ ಸಂಘಟನೆ ಬಗ್ಗೆ ಮಾತ್ರ ವಿಚಾರ ಮಾಡ್ತೇವೆ. ಅಭಿವೃದ್ಧಿ ಬಗ್ಗೆ ಬೆಳಗಾವಿ ಬಿಜೆಪಿ ನಾಯಕರಿಗೆ ಇಚ್ಛಾಶಕ್ತಿ ಇಲ್ಲ ಎಂದು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News