ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬ್ರಾಹ್ಮಣಶಾಹಿ ಹಿಡಿತದಲ್ಲಿದೆ: ಶಿವಸುಂದರ್

Update: 2020-11-26 14:24 GMT

ಬೆಂಗಳೂರು, ನ.26: ಡಾ.ಬಿ.ಆರ್.ಅಂಬೇಡ್ಕರ್ ಆಶಯದ ಸಂವಿಧಾನವನ್ನು ಬುಡಮೇಲು ಮಾಡುತ್ತಿರುವ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ದೇಶದ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗವು ಬ್ರಾಹ್ಮಣಶಾಹಿ ಹಾಗೂ ಕಾರ್ಪೊರೇಟ್ ಶಾಹಿಗಳ ಹಿಡಿತದಲ್ಲಿವೆ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಕರ್ನಾಟಕ ಸಂಘರ್ಷ ಸಮಿತಿ ನಗರದ ಜೈಭೀಮ್ ಭವನದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಂವಿಧಾನದ ಆಶಯಗಳು ಮತ್ತು ಸಮಕಾಲೀನ ಬಿಕ್ಕಟ್ಟುಗಳು ಕುರಿತ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ತಮ್ಮ ಅಂತಿಮ ದಿನಗಳಲ್ಲಿ ದೇಶದ ಭೂಮಿಯನ್ನು ರಾಷ್ಟ್ರೀಕರಣ ಮಾಡಬೇಕು. ಹಾಗೂ ದೇಶದ ಪ್ರತಿಯೊಬ್ಬರಿಗೂ ಭೂಮಿ ಹಂಚಿಕೆಯಾಗಬೇಕೆಂದು ಬಯಸಿದ್ದರು. ಹೀಗೆ ಅಂಬೇಡ್ಕರ್ ಬಯಸಿದ್ದ ಎಲ್ಲ ಸಮಾನತೆಯ ಆಶಯಗಳನ್ನು ಸಂವಿಧಾನದಲ್ಲಿ ಜಾರಿ ಮಾಡುವುದಕ್ಕೆ ಸಂವಿಧಾನ ರಚನಾ ಸಭೆಯಲ್ಲಿದ್ದ ಬ್ರಾಹ್ಮಣಶಾಹಿಗಳು ಅವಕಾಶ ಮಾಡಿಕೊಡಲಿಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಮನುವಾದಿಗಳೊಂದಿಗೆ ನಿರಂತರವಾಗಿ ಹೋರಾಡಿ ಸಂವಿಧಾನದ ಮೂಲಕ ಕಲ್ಪಿಸಿದ್ದ ಸಮಾನತೆ, ಜಾತ್ಯತೀತತೆ, ಭ್ರಾತೃತ್ವದ ಆಶಯಗಳು, ಕಾನೂನುಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗಾಳಿ ತೂರಿ, ಬ್ರಾಹ್ಮಣ ಹಾಗೂ ಕಾರ್ಪೊರೇಟ್‍ಶಾಹಿ ನೀತಿಗಳನ್ನು ಜಾರಿಗೆ ತರುತ್ತಿದೆ. ಹೀಗಾಗಿ ನಾವು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುದಾಗಬೇಕಾದ ಅನಿವಾರ್ಯ ನಮ್ಮೆದುರಿಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಿಂದ ಸರ್ವಾಧಿಕಾರಿ ಧೋರಣೆಯತ್ತ ಸಾಗುತ್ತಿರುವ ದೇಶದ ಪಟ್ಟಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಹೆಸರು ಇದೆ. ಭಾರತದಲ್ಲಿ ನರಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇಂತಹ ಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಅವರು ತಿಳಿಸಿದ್ದಾರೆ.

ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಇಡೀ ದೇಶದ ಸರ್ವಜನರನ್ನು ಹಿತದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದರು. ಅವರ ಆಶಯಗಳು ನಿಜವಾಗಿ ಜಾರಿಯಾಗಿದ್ದರೆ, ಭಾರತದ ಸಾಕಷ್ಟು ಮುಂದಿರುತ್ತಿತ್ತು. ಆದರೆ, ದೇಶವನ್ನಾಳಿದ ಮನುವಾದಿ ಸರಕಾರಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನುಗಳನ್ನು ಜಾರಿ ಮಾಡುತ್ತಾ ಬಂದಿವೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ್, ಸಿದ್ಧಾರ್ಥ ಶ್ರೀನಿವಾಸ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News