ಚಿಕ್ಕಮಗಳೂರು: ಮೈಕ್ ಅನುಮತಿಗೆ ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಧರಣಿ

Update: 2020-11-26 15:20 GMT

ಚಿಕ್ಕಮಗಳೂರು, ನ.26: ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮಸೇನೆ ವತಿಯಿಂದ ಗುರುವಾರ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ಹಮ್ಮಿಕೊಂಡಿದ್ದ ದತ್ತಹೋಮದ ಸಂದರ್ಭದಲ್ಲಿ ಮೈಕ್ ಬಳಸಿ ಭಜನೆ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಬಾಬಾಬುಡನ್‍ ದರ್ಗಾದಲ್ಲಿ ದಿಢೀರ್ ಧರಣಿ ನಡೆಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ದತ್ತಮಾಲಾ ಅಭಿಯಾನದ ಕೊನೆ ದಿನವಾದ ಗುರುವಾರ ದತ್ತಪಾದುಕೆ ದರ್ಶನಕ್ಕಾಗಿ ಶ್ರೀರಾಮಸೇನೆಯ ಕಾರ್ಯಕರ್ತರು ಗಿರಿಗೆ ತೆರಳಿದ್ದರು. ದತ್ತಗುಹೆಯೊಳಗೆ ತೆರಳಿ ದತ್ತಪಾದುಕೆ ದರ್ಶನ ಪಡೆದ ಸುಮಾರು 200 ಜನರಿದ್ದ ಕಾರ್ಯಕರ್ತರು ಮತ್ತು ಮುಖಂಡರು ಬಳಿಕ ದತ್ತಹೋಮದಲ್ಲಿ ಪಾಲ್ಗೊಂಡರು. ಬಳಿಕ ಕಾರ್ಯಕ್ರಮ ನಡೆಸಲು ಮೈಕ್‍ಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಹೋಮ ನಡೆದ ಜಾಗದಲ್ಲೇ ಧರಣಿ ಕುಳಿತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಎಡಿಸಿ ಡಾ.ಕುಮಾರ್ ಹಾಗೂ ಎಚ್.ಎಂ.ಅಕ್ಷಯ್ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗದೇ ಜಿಲ್ಲಾಕಾರಿ ಸ್ಥಳಕ್ಕೆ ಬರಲಿ ಎಂದು ಪಟ್ಟುಹಿಡಿದರು.

ನಿರ್ಬಂಧಿತ ಪ್ರದೇಶಕ್ಕೆ ನುಗ್ಗುವ ಯತ್ನ: ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದಿದ್ದಾಗ ಗಿರಿ ಆವರಣದಲ್ಲಿ ನಮಾಝ್ ಮಾಡುವ ಜಾಗಕ್ಕೆ ರಿಷಿಕುಮಾರ ಸ್ವಾಮೀಜಿ ಸೇರಿದಂತೆ ಶ್ರೀರಾಮಸೇನೆ ಮುಖಂಡರು, ಕಾರ್ಯಕರ್ತರು ನುಗ್ಗಲು ಮುಂದಾದರು. ಆದರೆ ಪೊಲೀಸರ ಸರ್ಪಗಾವಲು ಭೇದಿಸಲು ಕಾರ್ಯಕರ್ತರಿಗೆ ಸಾಧ್ಯವಾಗದ ಪರಿಣಾಮ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಘಟನೆ ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆಗಮಿಸಿದರು. ಈ ವೇಳೆ ರಿಷಿಕುಮಾರ ಸ್ವಾಮೀಜಿ, ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಸಿದ್ದಲಿಂಗ ಸ್ವಾಮೀಜಿ ಮತ್ತಿತರರು 'ಪೀಠದ ಆವರಣದಲ್ಲಿ ಕಾನೂನು ಮೀರಿ ನಮಾಝ್ ಮಾಡಿದವರ ವಿರುದ್ಧ ಕೇಸು ದಾಖಲಿಸಬೇಕು. ಇಲ್ಲದಿದ್ದರೆ ನಮಗೂ ಈಗ ಮೈಕ್ ಬಳಸಿ ಭಜನೆ ಮಾಡಲು ಅವಕಾಶ ನೀಡಿ' ಎಂದು ಒತ್ತಾಯಿಸಿದರು.

ಡಿಸಿ ಡಾ.ಬಗಾದಿ ಗೌತಮ್ ಮಾತನಾಡಿ, ಗುರುದತ್ತಾತ್ರೇಯ ಬಾಬಾಬುಡನ್‍ ಸ್ವಾಮಿ ದರ್ಗಾ ವಿವಾದಿತ ಪ್ರದೇಶದಲ್ಲಿ ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕಿದೆ. ಯಾವುದೇ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಇಲ್ಲಿ ನಮಾಝ್ ಮಾಡಿರುವ ಬಗ್ಗೆ ಬುಧವಾರ ನನಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೀರಿ. ಹೀಗಾಗಿ ನ್ಯಾಯಾಲಯ ಮತ್ತು ಮುಜರಾಯಿ ಇಲಾಖೆ ಆದೇಶ ಮತ್ತಿತರ ದಾಖಲೆ ಪರಿಶೀಲಿಸಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಎಲ್ಲವನ್ನೂ ಪರಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಂತರ ಮುಖಂಡರು ಧರಣಿಯನ್ನು ಕೈಬಿಟ್ಟರು. ಶ್ರೀರಾಮಸೇನೆಯ ರಾಜ್ಯ ಮುಖಂಡ ಮಹೇಶ್‍ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್‍ ಶೆಟ್ಟಿ, ದುರ್ಗಾಸೇನೆಯ ಶಾರದಮ್ಮ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಸಿಟಿ ರವಿ ವಿರುದ್ಧ ರಿಷಿ ಕುಮಾರ ಸ್ವಾಮೀಜಿ ವಾಗ್ದಾಳಿ

ಧರಣಿ ವೇಳೆ ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಮಾತನಾಡಿ, ಊರು ಕಾಯೋಕಾಗದವನು ದೇಶಕಾಯೋಕೆ ಹೋಗಿದ್ದಾನೆ ಎಂದು ಸಿ.ಟಿ.ರವಿ ವಿರುದ್ಧ ಹರಿಹಾಯ್ದರು. ಶಾಸಕ ಸಿ.ಟಿ.ರವಿಗೆ ಚುನಾವಣೆಗಾಗಿ ಮಾತ್ರ ದತ್ತ ಬೇಕು. ಆ ಸಂದರ್ಭ ಒಂದು ಶಲ್ಯ ಹಾಕುತ್ತಾರೆ. ಚಿಕ್ಕಮಗಳೂರಿನ ಹಿಂದೂಗಳು ಬೀದಿಗೆ ಬಂದಿದ್ದಾರೆ. ಅವರನ್ನು ಮೊದಲು ಕಾಪಾಡಲಿ. ನಂತರ ತಮಿಳುನಾಡು ಹಿಂದೂಗಳ ಬಗ್ಗೆ ಮಾತಾಡಲಿ. ಇಷ್ಟು ದಿನ ಸಿ.ಟಿ.ರವಿಗೆ ದತ್ತಪೀಠದಲ್ಲಿ ಮೈಕ್ ಹಾಕಿ ನಮಾಝ್ ಮಾಡುತ್ತಿದ್ದ ವಿಷಯ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ದತ್ತಪೀಠವನ್ನು ಮುಸ್ಲಿಮರಿಗೆ ಕೊಡುವ ಷಡ್ಯಂತ್ರವನ್ನು ಸಿ.ಟಿ.ರವಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಚಳಿಗಾಲದ ಅವೇಶನದಲ್ಲಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ತೀರ್ಮಾನ ತೆಗದುಕೊಳ್ಳದಿದ್ದಲ್ಲಿ 4-5 ಲಕ್ಷ ದತ್ತ ಭಕ್ತರು ಬಂದು ಇಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು. 

ಸಿದ್ದಲಿಂಗಸ್ವಾಮಿ ಮಾತನಾಡಿ, ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ಸಹಿಸೆವು. ಸಿ.ಟಿ.ರವಿ ಜಾಣಕುರುಡುತನ ಪ್ರದರ್ಶಿಸುವುದನ್ನು ಬಿಡಬೇಕು. ಮೈಕ್‍ನಲ್ಲಿ ನಮಾಝ್ ಮಾಡಿದವರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ಗಂಗಾಧರ ಕುಲಕರ್ಣಿ ಮಾತನಾಡಿ, 2002 ರಿಂದ ಮೈಕ್ ಬಳಸುತ್ತಿದ್ದಾರೆ ಎಂದು ಮುಜರಾಯಿ ಇಲಾಖೆ ಅಕಾರಿಗಳು ಹೇಳುತ್ತಿದ್ದಾರೆ. ಅದು ಕ್ರಮಬದ್ಧವಾಗಿದ್ದರೆ ಈಗ ತೆಗೆಸಿದ್ದಾದರೂ ಏಕೆ ಎಂದು ಪ್ರಶ್ನಿಸಿದರು. ನಮಾಝ್ ಮಾಡಿರುವವರ ವಿರುದ್ಧ ಕೇಸು ಹಾಕದಿದ್ದಲ್ಲಿ ಡಿಸೆಂಬರ್ ನಲ್ಲಿ ಮತ್ತೆ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಗಿರಿಗೆ ಬಂದ ದತ್ತಭಕ್ತರು 120-200 ಸಂಖ್ಯೆಯ ಆಸುಪಾಸಿನಲ್ಲಿದ್ದರು. ಆದರೆ, ಭದ್ರತೆಗಾಗಿ ಆಯೋಜಿಸಿದ್ದ ಪೊಲೀಸರ ಸಂಖ್ಯೆ ದುಪ್ಪಟ್ಟಾಗಿತ್ತು. ನಗರ ಸೇರಿದಂತೆ ಗಿರಿಗೆ ತೆರಳುವ ಆಯಕಟ್ಟಿನ ಜಾಗ, ಅತ್ತಿಗುಂಡಿಯ ಮುಸ್ಲಿಮರ ಮನೆಗಳಿರುವ ಪ್ರದೇಶದಲ್ಲಿ ಬಿಗಿ ಪೊಲೀಸ್ ಪಡೆ ಹಾಕಲಾಗಿತ್ತು. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಡಿಸಿ ಡಾ.ಬಗಾದಿ ಗೌತಮ್, ಎಸ್ಪಿ ಎಚ್.ಎಂ.ಅಕ್ಷಯ್, ಎಎಸ್ಪಿ ಶೃತಿ, ಎಡಿಸಿ ಡಾ.ಕುಮಾರ್, ಮುಜರಾಯಿ ಇಲಾಖೆ ಅಕಾರಿ ಶ್ರೀನಿವಾಸ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News