ಮದುವೆ ಪ್ರಸ್ತಾವ ತಿರಸ್ಕರಿಸಿದ್ದ ಯುವತಿಯ ಹತ್ಯೆ: ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Update: 2020-11-26 15:16 GMT

ಕಲಬುರಗಿ, ನ.26: ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದ ಯುವತಿಯನ್ನು ಹತ್ಯೆ ಮಾಡಿದ್ದ ಆರೋಪಿ ಯುವಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಲಬುರಗಿ ಹೈಕೋರ್ಟ್ ಎತ್ತಿಹಿಡಿದಿದೆ.

ಇದೇ ವೇಳೆ ವಿವಾಹ ಪ್ರಸ್ತಾವವನ್ನು ಯುವತಿ ನಿರಾಕರಿಸಿದ್ದರಿಂದ ಯುವಕ ಹಠಾತ್ ಪ್ರಚೋದನೆಗೆ ಒಳಗಾಗಿ ಹತ್ಯೆ ಮಾಡಿದ ಎಂಬ ವಾದವನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ.

ಕಲಬುರ್ಗಿ ಜಿಲ್ಲೆಯ ವಿಜಯ್(26) ಶಿಕ್ಷೆಗೆ ಗುರಿಯಾಗಿರುವ ಯುವಕನಾಗಿದ್ದು, ಈತ 2009ರ ಎ.24ರ ಮಧ್ಯಾಹ್ನ ಯುವತಿ ಪುಷ್ಪಾಳ ಮನೆಗೆ ಏಕಾಏಕಿ ನುಗ್ಗಿ ಪ್ರೀತಿಸುವಂತೆ, ಮದುವೆಯಾಗುವಂತೆ ಪ್ರಸ್ತಾವವಿಟ್ಟಿದ್ದ. ಒಪ್ಪದಿದ್ದರೆ ಬೇರೆ ಯಾರನ್ನೂ ಮದುವೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈತನ ಪ್ರಸ್ತಾವವನ್ನು ಯುವತಿ ಸಾರಾಸಗಟಾಗಿ ತಿರಸ್ಕರಿಸಿದ್ದಳು.

ಇದರಿಂದ ಕುಪಿತಗೊಂಡಿದ್ದ ಆರೋಪಿ ವಿಜೇಂದ್ರ ಯುವತಿಯ ದೇಹಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಕೂಡಲೇ ಯುವತಿ ಪುಷ್ಪಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಘಟನೆ ಸಂಬಂಧ ಎಫ್‍ಐಆರ್ ದಾಖಲಿಸಿದ್ದ ಪೊಲೀಸರು, ಆರೋಪಿ ವಿಜೇಂದ್ರನ ವಿರುದ್ಧ ಕಲಬುರ್ಗಿಯ 4ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ 2016ರ ಜನವರಿ 23 ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಈ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಆರೋಪಿ ವಿಜೇಂದ್ರ ಹೈಕೋರ್ಟ್‍ನ ಕಲಬುರಗಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದಿಸಿ, ವಿಜೇಂದ್ರ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಪುಷ್ಪಾ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದರಿಂದ ಹಠಾತ್ ಪ್ರಚೋದನೆಗೆ ಒಳಗಾಗಿ ಹತ್ಯೆ ಮಾಡಿದ್ದಾನೆ ಎಂದು ಸಮಜಾಯಿಸಿ ನೀಡಲು ಪ್ರಯತ್ನಿಸಿದರು.

ಈ ವಾದವನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ವಿವಾಹ ಪ್ರಸ್ತಾವವನ್ನು ತಿರಸ್ಕರಿಸಿದ್ದರಿಂದಲೇ ಹಠಾತ್ ಪ್ರಚೋದನೆ ಉಂಟಾಗಿ ಕೊಲೆ ನಡೆಯಿತು ಎಂದು ಪ್ರಕರಣವನ್ನು ಪರಿಗಣಿಸುವುದು ತೀರಾ ಅಸಹ್ಯಕರ. ಇದೇ ಆಧಾರದಲ್ಲಿ ಆರೋಪಿಗೆ ಕಾನೂನಿನಿಂದ ರಕ್ಷಣೆ ನೀಡುವುದು ನ್ಯಾಯೋಚಿತವಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹಾಗೆಯೇ ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News