ಬಳ್ಳಾರಿ ಜಿಲ್ಲೆಯನ್ನು ‘ವಿಜಯನಗರ’ ಎಂದು ಮರು ನಾಮಕರಣಗೊಳಿಸುವುದು ಸೂಕ್ತ: ಡಾ.ಎಚ್.ಎಸ್.ದೊರೆಸ್ವಾಮಿ

Update: 2020-11-26 15:25 GMT

ಬೆಂಗಳೂರು, ನ.26: ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಮಾಡುವುದು. ಈಗಾಗಲೆ, ಇದಕ್ಕೆ ಪರ ವಿರೋಧ ಅಭಿಪ್ರಾಯಗಳು, ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ, ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ರಚನೆಗೆ ಒಂದು ಹಂತದ ಅನುಮೋದನೆಯು ಲಭ್ಯವಾಗಿದೆ.

ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಸರಕಾರದ ಧೋರಣೆ ವಿರುದ್ಧ ಇಂಡು ಬಳ್ಳಾರಿ ಬಂದ್‍ಗೆ ಕರೆ ನೀಡಲಾಗಿತ್ತು. ಈ ಬೆಳವಣಿಗೆಗಳ ನಡುವೆಯೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ, ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಬದಲು ಸಮಗ್ರ ಜಿಲ್ಲೆಗೆ ವಿಜಯನಗರ ಎಂದು ಮರು ನಾಮಕರಣಗೊಳಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ‘ವಾರ್ತಾಭಾರತಿ’ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯನ್ನು ಎರಡಾಗಿ ಒಡೆಯಲು ಸಜ್ಜನರು, ಗಣಿಧಣಿಗಳು ಆದ ಆನಂದ್ ಸಿಂಗ್ ಸಜ್ಜಾಗುತ್ತಿದ್ದಾರೆ. ಸಜ್ಜನ ಶ್ರೀರಾಮುಲು ಕೂಡ ಅದೇ ಅಭಿಪ್ರಾಯ ಹೊಂದಿದ್ದಾರೆಂದು ಹೇಳಲಾಗಿದೆ. ಬಳ್ಳಾರಿ ಜಿಲ್ಲೆ ಸಂಪದ್ಭರಿತ ಜಿಲ್ಲೆ. ಗಣಿ ಉದ್ಯಮದ ಜೊತೆ ಜೊತೆಗೆ ನೀರಾವರಿ ಸೌಲಭ್ಯಗಳು ಹೆಚ್ಚು ಇದ್ದು, ಕರ್ನಾಟಕದ ಮುಂದುವರಿದ ಜಿಲ್ಲೆಗಳಲ್ಲಿ ಅದೂ ಒಂದಾಗಿದೆ ಎಂದು ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಅಲ್ಲದೆ, ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಇತಿಹಾಸ ಈ ಜಿಲ್ಲೆಯ ಒಂದು ಮುಖ್ಯ ತಾಣವಾಗಿದೆ. ಹಂಪಿಯ ನಡು ಬದಿಯಲ್ಲಿ ಮುತ್ತು ರತ್ನಗಳನ್ನು ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿತ್ತು ಎಂದರೆ ಆ ಕಾಲದ ಜನ ಎಂತಹ ಸಭ್ಯ ಪ್ರಜೆಗಳಾಗಿದ್ದರು ಎಂಬುದಕ್ಕೆ ಆಡಳಿತ ವ್ಯವಸ್ಥೆ ಎಷ್ಟು ಭಿನ್ನವಾಗಿತ್ತು ಎಂಬುದನ್ನು ಸಾರಿ ಹೇಳುತ್ತದೆ ಎಂದು ಅವರು ತಿಳಿಸಿದರು.

ಈ ಗತವೈಭವದ ಕನ್ನಡ ಸಾಮ್ರಾಜ್ಯದ ಹೆಸರನ್ನು ಚಿರಸ್ಥಾಯಿಗೊಳಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ. ಆದರೆ, ಬಳ್ಳಾರಿ ಜಿಲ್ಲೆಯನ್ನು ಒಡೆದು ಪ್ರತ್ಯೇಕಿಸಿ ವಿಜಯನಗರ ಜಿಲ್ಲೆಯನ್ನು ರಚಿಸಿಸುವುದಕ್ಕಿಂತ, ಇಡೀ ಬಳ್ಳಾರಿ ಜಿಲ್ಲೆಯನ್ನು ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡುವುದು ಹೆಮ್ಮೆಯ ವಿಷಯ ಎಂದು ದೊರೆಸ್ವಾಮಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು.

ಬಳ್ಳಾರಿ ಜಿಲ್ಲೆಗೆ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂಬ ಕೆಟ್ಟ ಹೆಸರು ಇದೆ. ಬಳ್ಳಾರಿ ಎಂದೊಡನೆ ಖನಿಜಗಳನ್ನು ದೋಚುವ ಸ್ವಾರ್ಥಿಗಳಿಂದ ಕೂಡಿದ ಜಿಲ್ಲೆ ಎಂಬ ಅಪಖ್ಯಾತಿಯೂ ಇದೆ. ಈ ಕಳಂಕದಿಂದ ಹೊರ ಬರಬೇಕಾದ ಅಗತ್ಯತೆ ಇದೆ. ಅಪಖ್ಯಾತಿಗೆ ಗುರಿಯಾಗಿರುವ ಬಳ್ಳಾರಿ ಜಿಲ್ಲೆಯ ಹೆಸರನ್ನು ಬದಲಿಸಿ ವಿಜಯನಗರ ಜಿಲ್ಲೆ ಎಂದು ನಾಮಕರಣ ಮಾಡುವುದು ಕರ್ನಾಟಕದ ಘನತೆ, ಗೌರವಗಳನ್ನು ಇಮ್ಮಡಿಗೊಳಿಸುತ್ತದೆ ಎಂದು ಅವರು ಹೇಳಿದರು.

ಆದುದರಿಂದ, ಬಳ್ಳಾರಿ ಜಿಲ್ಲೆ ಎಂಬ ಹೆಸರನ್ನು ಬದಲಿಸಿ ವಿಜಯನಗರ ಜಿಲ್ಲೆ ಎಂದು ರಾಜ್ಯ ಸರಕಾರ ಘೋಷಿಸಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಮನವಿ ಮಾಡುತ್ತೇನೆ ಎಂದು ದೊರೆಸ್ವಾಮಿ ತಿಳಿಸಿದರು.

Writer - -ಅಮ್ಜದ್ ಖಾನ್ ಎಂ.

contributor

Editor - -ಅಮ್ಜದ್ ಖಾನ್ ಎಂ.

contributor

Similar News