ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿಗಮಗಳ ಸ್ಥಾಪನೆ ಬೇಕೇ: ಬೇಳೂರು ಗೋಪಾಲಕೃಷ್ಣ ಪ್ರಶ್ನೆ

Update: 2020-11-26 16:49 GMT

ಶಿವಮೊಗ್ಗ, ನ.26; ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರನೇ ಎಲ್ಲಾ ಚುನಾವಣೆ ಗೆಲ್ಲಿಸುತ್ತಿದ್ದಾರೆ ಎಂದರೆ ಈಶ್ವರಪ್ಪ ಸೇರಿದಂತೆ ಎಲ್ಲಾ ಮಂತ್ರಿಗಳು ಮನೆಯಲ್ಲಿ ಕುಳಿತುಕೊಳ್ಳಲಿ. ಇವರೆಲ್ಲಾ ಕೈಯಲಾಗದವರು ಎಂದು ಒಪ್ಪಿಕೊಂಡಿದ್ದಾರೆಯೇ ಎಂದು ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ  ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬಿ. ವೈ ವಿಜಯೇಂದ್ರನೇ ಎಲ್ಲಾ ಚುನಾವಣೆ ಗೆಲ್ಲಿಸುತ್ತಿದ್ದಾರೆ ಎಂದರೆ ಇವರ ಪಕ್ಷದ ಸಂಘಟಕರು, ಮಂತ್ರಿಗಳು, ರಾಜ್ಯಧ್ಯಕ್ಷರು ಏನು ಇಲ್ಲ ಎಂಬಂತಾಯಿತು ಎಂದು ವ್ಯಂಗ್ಯವಾಡಿದರು.

ಶಿರಾ ಮತ್ತು ಆರ್.ಆರ್ ನಗರ ವಿಧಾನ ಸಭಾ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ದಾರೆ. ವಿಜಯೇಂದ್ರ ಪೊಲೀಸ್ ವಾಹನದಲ್ಲಿ ಹಣ ತೆಗೆದುಕೊಂಡು ಹೋಗಿ ಶಿರಾದಲ್ಲಿ ಚುನಾವಣೆ ನಡೆಸಿ ರಾಜಕೀಯ ಮಾಡುತ್ತಿದ್ದಾರೆ. ಶಿರಾದಲ್ಲಿ ಎಷ್ಟು ಹಣ ತೆಗೆದುಕೊಂಡು ಹೋಗಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇದೆ ಎಂದು ಹೇಳಿದರು.

ನಿಗಮಗಳ ಸ್ಥಾಪನೆಗೆ ಬೇಳೂರು ಕಿಡಿ:

ನಿಗಮಗಳ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿರುವುದನ್ನು ಸ್ವತಃ ಡಿಸಿಎಂ ಲಕ್ಷ್ಮಣ್ ಸವದಿಯವರೇ ಒಪ್ಪಿಕೊಂಡಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸಿಬ್ಭಂದಿಗೆ ವೇತನ ನೀಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ, ಸಿಎಂ ನಿಗಮಗಳನ್ನು ರಚಿಸಲು ಹೊರಟಿದ್ದಾರೆ. ಇದು ಸರ್ಕಾರಕ್ಕೆ ಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಹುಡುಗಾಟಿಕೆ ಆಡಲು ಹೊರಟಿದ್ದಾರೆ. ಒಂದೆರೆಡು ಸಮುದಾಯಗಳ ನಿಗಮ ಮಾಡುವುದು ಬೇಡ. ಲಿಂಗಾಯತರಿಗೆ, ಮರಾಠರಿಗೆ ನಿಗಮ ಮಾಡಿರುವುದು ಸಂತಸ. ಆದರೆ, ಬಾಕಿ ಸಮಾಜದವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಇನ್ನು ಅತಿವೃಷ್ಟಿ ಪರಿಹಾರ ನೀಡಿಲ್ಲ. ಆದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿಗಮ ಸ್ಥಾಪಿಸುವುದು ಎಷ್ಟು ಸರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News