ಸಿಎಂ ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ: ಸಂಸದ ವಿ.ಶ್ರೀನಿವಾಸಪ್ರಸಾದ್

Update: 2020-11-26 17:14 GMT

ಮೈಸೂರು,ನ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಮುಳ್ಳಿನಿಂದ ಪಂಚೆಯನ್ನು ಹುಷಾರಾಗಿ ತೆಗೆಯಬೇಕು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಸಮಧಾನ ಹೊರಹಾಕಿದರು.

ನಗರದ ಕೃಷ್ಣಮೂರ್ತಿ ಪುರಂನಲ್ಲಿ ಗುರುವಾರ ಸಮಾನತೆ- ಸ್ವಾಭಿಮಾನ- ಸ್ವಾವಲಂಭನೆ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಭಾರತ ಸಂವಿಧಾನ ಅಂಗೀಕಾರ ದಿನಾಚರಣೆ ಹಿನ್ನಲೆಯಲ್ಲಿ ಪ್ರತಿಷ್ಠಾನದ ಆಶಯ ಕೈಪಿಡಿಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುದ್ದಿವಂತಿಕೆ, ತಾಳ್ಮೆ ಬೇಕು. ಮುಖ್ಯಮಂತ್ರಿ ಅಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಆದರೆ, ಸ್ವಲ್ಪ ತಾಳ್ಮೆ ಇರಬೇಕು. ಯಡಿಯೂರಪ್ಪ ಬದಲಾಗಿದ್ದಾರೆ ಅಂತ ಹೇಳುವುದಿಲ್ಲ. ಬದಲಾಗಿಲ್ಲ ಅಂತಲೂ ಹೇಳುವುದು ಕಷ್ಟ. ಅಧಿಕಾರ ಬಂದಾಗ ಸ್ವಲ್ಪ ಬದಲಾವಣೆ ಆಗೋದು ಸಹಜ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಇತ್ತು, ಆದರೆ, ಬುದ್ದಿವಂತಿಕೆ ಇರಲಿಲ್ಲ. ಆದ್ದರಿಂದಲೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಚುನಾವಣೆಯಲ್ಲೂ ಸೋಲು ಅನುಭವಿಸಬೇಕಾಯಿತು ಎಂದರು.

ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದಾರೆ. ಅದನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಎಲ್ಲರೊಂದಿಗೆ ಚರ್ಚಿಸಿ ನೇಮಕ ಮಾಡಿದ್ದರೆ ಇನ್ನೂ ಚೆನ್ನಾಗಿ ಆಗುತ್ತಿತ್ತು. ಅವರಿಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ನನಗೆ ಬೇಸರ ಆಗಿದೆ ಅಂತ ನಾನು ಹೇಳಿದ್ದೇನೆ ಎಂದರು.

ಮಂತ್ರಿ ಮಂಡಲ ವಿಸ್ತರಣೆ ಸಂಬಂಧ ಬಿ.ಎಸ್.ಯಡಿಯೂರಪ್ಪ ಹಾಗೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ತಿಹಾರ್ ಜೈಲು ಕಂಡವರನ್ನು ಪಕ್ಷದ ಪ್ರೆಸಿಡೆಂಟ್ ಮಾಡಿದರೆ ಜನ ಹೇಗೆ ಓಟ್ ಹಾಕ್ತಾರೆ? ಕಾಂಗ್ರೆಸ್‍ಗೆ ಶತಮಾನದ ಇತಿಹಾಸವಿದೆ ಎಂದು ಕುಟುಕಿದರು.

ಕೇಂದ್ರ ಸಚಿವ ಸ್ಥಾನಾವಕಾಶ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಮಂತ್ರಿಗಿರಿ ಬೇಡ. ನಾನು ಚುನಾವಣೆ ಸಾಕೆಂದು ನಿರ್ಧರಿಸಿದ್ದೆ. ಸಿದ್ದರಾಮಯ್ಯನವರ ನಿರ್ಧಾರಗಳಿಂದ ಬೇಸತ್ತು ಚುನಾವಣೆಯಲ್ಲಿ ಸ್ಪರ್ಧಿಸಿದೆ. ಅವರಿಗೆ ಪಾಠ ಕಲಿಸಿದ್ದಾಗಿದೆ. ವಾಜಪೇಯಿ ಅವಧಿಯಲ್ಲಿ ಸಚಿವನಾಗಿದ್ದೆ. ರಾಜ್ಯ ಸಚಿವನಾಗಿ, ಸ್ವಜಪಕ್ಷಪಾತವಿಲ್ಲದೆ, ಭ್ರಷ್ಟನಾಗದೆ ಕೆಲಸ ಮಾಡಿದ ತೃಪ್ತಿ ನನಗಿದೆ. ಅಷ್ಟು ಸಾಕು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News