21ನೇ ಶತಮಾನದಲ್ಲೂ ಅಸಮಾನತೆ, ಅಸ್ಪೃಶ್ಯತೆ ಜೀವಂತ: ಸಂಸದ ಶ್ರೀನಿವಾಸಪ್ರಸಾದ್

Update: 2020-11-26 17:28 GMT

ಮೈಸೂರು,ನ.26: 21ನೇ ಶತಮಾನದಲ್ಲೂ ಅಸಮಾನತೆ, ಅಸ್ಪೃಶ್ಯತೆ ಜೀವಂತವಾಗಿರುವುದು ವಿಪರ್ಯಾಸದ ಸಂಗತಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ-ಪ್ರತಿಷ್ಠಾನದ ವತಿಯಿಂದ ನಗರದ ಕೃಷ್ಣಮೂರ್ತಿಪುರಂನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಗುರುವಾರ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸಪ್ರಸಾದ್ ಅವರು ಸಂವಿಧಾನ ಪತ್ರಿಗೆ ಪುಷ್ಪಾರ್ಚನೆಗೈದು, ಅಂಬೇಡ್ಕರ್ ಅವರ ಆಶಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾನತೆಗೆ ಸ್ವಾತಂತ್ರ್ಯ, ಭಾತೃತ್ವ ಇರಬೇಕು ಆಗ ಮಾತ್ರ ಅದು ಸಾರ್ಥಕವಾಗುತ್ತದೆ. 21ನೇ ಶತಮಾನದಲ್ಲೂ ಅಸಮಾನತೆ, ಅಸ್ಪೃಶ್ಯತೆ ಜೀವಂತವಾಗಿದ್ದು, ದೌರ್ಜನ್ಯ, ದಬ್ಬಾಳಿಕೆಗಳು, ನಡೆಯುತ್ತಿರುವುದು ವಿಪರ್ಯಾಸದ ಸಂಗತಿ. ಇದನ್ನೆಲ್ಲ ನೋಡಿದರೆ ಇದಕ್ಕೆ ಕೊನೆಯಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಅಸ್ಪೃಶ್ಯತೆ ವಿರುದ್ಧ ಶತಮಾನಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೂ ಅಸ್ಪೃಶ್ಯತೆ ಆಚರಣೆ ಇನ್ನೂ ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ಅವರ ಸಮಾನತೆ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಚಿಂತನೆಗಳ ಹಿನ್ನೆಲೆಯಲ್ಲಿ ಈ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ಅದಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ. ಶಿಕ್ಷಣ ನಮ್ಮನ್ನು ಬಲಗೊಳಿಸುತ್ತದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.

ಇಂದು ಮಹತ್ತರವಾದ ದಿನ. ಅಂಬೇಡ್ಕರ್ ಅವರ ಆಶಯ, ಚಿಂತನೆಗಳನ್ನು ನಾವು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಮಾಜಿ ಕುಲಪತಿ ಪ್ರೊ.ಬಸವರಾಜು, ಭರತ್ ರಾಮಸ್ವಾಮಿ, ಸಿ.ಬಸವೇಗೌಡ, ಕುಂಬ್ರಹಳ್ಳಿ ಸುಬ್ಬಣ್ಣ, ಡಾ.ಮಳ್ಳೂರು ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News