ಜಮೀನಿಗೆ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ: ಕಾಫಿ ಗಿಡಗಳು ನಾಶ

Update: 2020-11-26 17:51 GMT

ಮಡಿಕೇರಿ ನ.26 : ಕಳೆದ ಹಲವು ವರ್ಷಗಳಿಂದ ಕಾಫಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದ ಜಮೀನಿಗೆ ಏಕಾಏಕಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಫಸಲು ನೀಡುತ್ತಿರುವ ಗಿಡಗಳನ್ನು ನಾಶ ಮಾಡಿರುವ ಘಟನೆ ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. 

ಗಾಳೀಬೀಡು ಸಮೀಪದ ಹೆಬ್ಬೆಟ್ಟಗೇರಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಬ್ರ ಕಾಲೋನಿಯಲ್ಲಿ ಸುಮಾರು 40ಕ್ಕೂ ಅಧಿಕ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ವಾಸವಾಗಿವೆ. ಕೆಲವು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಫಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಹಲವು ಕುಟುಂಬಗಳು ಹಕ್ಕುಪತ್ರ ಪಡೆದು ವಾಸವಾಗಿದ್ದಾರೆ. ಯಾವುದೇ ಮಾಹಿತಿ ನೀಡದೆ ಇಲ್ಲಿನ 4-5 ಕುಟುಂಬಗಳ ತೋಟಕ್ಕೆ ನುಗ್ಗಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಾಏಕಿ ಕಾಫಿಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಮಂಗಳವಾರ ಇಲ್ಲಿನ ಕೆಲವು ನಿವಾಸಿಗಳ ಬಳಿ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ತೋಟಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಆದರೆ, ಬುಧವಾರ ಬೆಳಗ್ಗೆಯೇ ದಾಳಿ ಮಾಡಿದ ಸಿಬ್ಬಂದಿಗಳು ಕಾಫಿ, ಕರಿಮೆಣಸು, ವಿವಿಧ ಹಣ್ಣುಗಳ ಗಿಡವನ್ನು ನಾಶ ಮಾಡಿದ್ದಾರೆ. ಗುಡ್ಡ ಪ್ರದೇಶದಲ್ಲಿ ನೀರಿನ ಕೊರತೆಯ ನಡುವೆ ಕಷ್ಟಪಟ್ಟು ಬೆಳೆಯಲಾಗಿದ್ದ ಗಿಡಗಳನ್ನು ಕಿತ್ತು ಹಾಕಲಾಗಿದೆ. ಗುರುವಾರ ಮತ್ತೆ ಎಸಿಎಫ್ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ತಹಶೀಲ್ದಾರ್ ರನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದು ಎಸಿಎಫ್ ಪ್ರತಿಕ್ರಿಯಿಸಿದ್ದು, ಇದ್ದ ಗಿಡಗಳನ್ನೂ ನಾಶ ಮಾಡಿದ ಮೇಲೆ ಪರಿಶೀಲನೆ ಮಾಡುವುದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 

ನಮಗೆ ನ್ಯಾಯ ದೊರಕಬೇಕಿದ್ದು, ಇಲ್ಲಿಯವರೆಗೆ ಕಷ್ಟಪಟ್ಟು ಬೆಳೆಸಿದ ಕಾಫಿ ಗಿಡಗಳನ್ನು ನಾಶ ಮಾಡಿದ್ದಕ್ಕೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆಯೇ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

''ಅರಣ್ಯ ಇಲಾಖೆಯಿಂದ ಕಿರುಕುಳ''
ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಸಿ ಮತ್ತು ಡಿ ಭೂಮಿ ಆಗಿದ್ದು, ಕಂದಾಯ ಇಲಾಖೆ ಪ್ಲಾಂಟೇಷನ್‍ಗೆ ಮಾತ್ರ ಅರಣ್ಯ ಇಲಾಖೆಗೆ ಜಾಗ ನೀಡಿತ್ತು. ಸದ್ಯ ಜಾಗ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಅಲ್ಲಿ ಬಡವರು ಕೃಷಿ ಮಾಡಿಕೊಂಡಿದ್ದು, ಫಾರಂ ನಂ. 50, 53, 57 ಅರ್ಜಿಗಳನ್ನು ಸಲ್ಲಿಸಿದರೂ ಏಕಾಏಕಿ ಗಿಡಗಳನ್ನು ನಾಶಪಡಿಸಿರುವುದು ಸರಿಯಲ್ಲ. ಕೃಷಿಕರಿಗೆ ಸೂಕ್ತ ನ್ಯಾಯ ಒದಗಿಸುವುದರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
-ಕೊಕ್ಕಲೇರ ಅಯ್ಯಪ್ಪ, ಮಾಜಿ ಅಧ್ಯಕ್ಷರು, ಕೆ.ನಿಡುಗಣೆ ಗ್ರಾ.ಪಂ

ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನಮ್ಮ ನೆಡುತೋಪು ಇದೆ. ಪ್ಲಾಂಟೇಷನ್ ಇರುವುದರಿಂದ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಲಾಗಿದೆ. 
-ಪ್ರಭಾಕರನ್, ಡಿಎಫ್‍ಓ, ಮಡಿಕೇರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News