ಶಾಲೆ ಆರಂಭಿಸುವ ಬಗ್ಗೆ ಸರಕಾರದಿಂದಲೇ ವಿನಾಕಾರಣ ಗೊಂದಲ: ಎಚ್.ವಿಶ್ವನಾಥ್

Update: 2020-11-26 18:21 GMT

ಮಡಿಕೇರಿ, ನ.26: ರಾಜ್ಯದಲ್ಲಿ ಶಾಲೆಗಳ ಆರಂಭಿಸುವ ವಿಚಾರ ಕುರಿತು ಸರಕಾರವೇ ವಿನಾಕಾರಣ ಗೊಂದಲ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಶಾಲೆ ಆರಂಭಿಸಬೇಕೋ ಬೇಡವೋ ಎನ್ನೋದು ಪೋಷಕರು, ಶಿಕ್ಷಕರಿಗೆ ಬಿಟ್ಟ ವಿಚಾರ. ಸರ್ಕಾರ ಸುಮ್ಮನೆ ಯಾರೋ ಅಧಿಕಾರಗಳ ಕೂರಿಸಿಕೊಂಡು ಸಭೆ ಮಾಡಿದರೆ ಆಗಲ್ಲ ಎಂದು ಹೇಳಿದರು.

ಖಾಸಗಿ ಶಾಲೆಗಳು ಶುಲ್ಕ ಪಡೆಯಲು ಒತ್ತಾಯ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಖಾಸಗಿ ಶಾಲೆಗಳು ಸರ್ಕಾರ ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿದೆ. ಅವರನ್ನು ಸ್ವಲ್ಪ ಅದ್ದು ಬಸ್ತಿನಲ್ಲಿಡಬೇಕು, ಎಲ್ಲಾ ಸಂದರ್ಭದಲ್ಲಿ ಅವರ ಖಜಾನೆ ತುಂಬಬೇಕೆಂದರೆ ಆಗಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ವಿರುದ್ಧ ಅಸಮಾಧಾನ ಹೊರಹಾಕಿದರು.

ರಾಜ್ಯ ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ಆಕಾಂಕ್ಷಿಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಯಾರಿಗೆ ಸಚಿವ ಸ್ಥಾನ ಸಿಗಬೇಕು ಎನ್ನೋದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾವ್ಯಾರು ಸಚಿವ ಸ್ಥಾನ ಬೇಕು ಅಂತ ಬಂದವರಲ್ಲ, ರಾಜ್ಯದಲ್ಲಿ ಹೊಸ ಅಲೆಯ ಸರ್ಕಾರ ಬರಬೇಕು ಎನ್ನುವುದಿತ್ತು. ಹೀಗಾಗಿ 17 ಜನರು ಬಂದೆವು, ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ, ಇನ್ನು ಕೆಲವರು ಆಕಾಂಕ್ಷಿಗಳಿದ್ದಾರೆ ಎಂದು ವಿಶ್ವನಾಥ್ ಹೇಳಿದರು. 

ಪಕ್ಷದಲ್ಲಿ ಕೆಲವರನ್ನು ಕಡಿಗಣಿಸಲಾಗುತ್ತಿದೆ ಎಂಬ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಸ್ನೇಹಿತರು. ಆ ಸಂದರ್ಭ ಸಂಘಟಿತರಾಗಿ ಹೋರಾಟ ಮಾಡಿಕೊಂಡು ಬಂದವರು. ಈಗ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನೋ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಯಾರ್ಯಾರನ್ನು ಕಡೆಗಣಿಸಲಾಗುತ್ತಿದೆಯೋ ಯಾರಿಗೆ ಗೊತ್ತು ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. 

ರಾಜ್ಯದಲ್ಲಿ ವಿವಿಧ ಸಮುದಾಯಗಳು ನಿಗಮ ಸ್ಥಾಪನೆಗೆ ಹೋರಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ವಿಶ್ವನಾಥ್, ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಸಂಬಂಧಿಸಿದವರೊಂದಿಗೆ ಸಮ ಚಿತ್ತದಿಂದ ಚರ್ಚೆ ಸಂವಾದ ನಡೆಸಬೇಕಾಗಿದೆ. ಆ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನ ನಡೆಸಬೇಕಾಗಿದೆ. ಆ ಬಳಿಕ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News