ರೈತರ ಜತೆ ಚರ್ಚೆಗೆ ಸಿದ್ಧ : ರಾಜನಾಥ್ ಸಿಂಗ್

Update: 2020-11-27 04:05 GMT

ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಕಾವು ಹೆಚ್ಚಿರುವ ನಡುವೆಯೇ ಕೇಂದ್ರದ ಉದಾರೀಕೃತ ನೀತಿ ರೈತ ಸಮುದಾಯಕ್ಕೆ ಲಾಭವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಈ ಮಧ್ಯೆ ಪ್ರತಿಭಟನಾ ನಿರತ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಎಚ್‌ಟಿ ಲೀಡರ್‌ಶಿಪ್ ಸಮಿಟ್-2020ಯಲ್ಲಿ ಮಾತನಾಡಿದ ಅವರು, "ನಾನು ದೇಶದ ರೈತರಿಗೆ ಮರು ಖಾತರಿ ನೀಡಲು ಬಯಸುತ್ತೇನೆ. ಅವರು ತಮ್ಮ ಪ್ರತಿಭಟನೆ ನಿಲ್ಲಿಸಲಿ. ಅವರನ್ನು ಮಾತುಕತೆಗೆ ಆಹ್ವಾನಿಸುತ್ತೇನೆ. ನಾನು ರಕ್ಷಣಾ ಸಚಿವ. ಆದರೆ ರೈತನ ಮಗನಾಗಿ ಅವರನ್ನು ಆಹ್ವಾನಿಸುತ್ತಿದ್ದೇನೆ. ನಾವು ಎಂದೂ ರೈತರಿಗೆ ಮೋಸ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ ದಿನಸಿ, ಉಣ್ಣೆ ಬಟ್ಟೆ, ಅಗತ್ಯ ವಸ್ತುಗಳನ್ನು ನವೀಕೃತ ಟ್ರ್ಯಾಕ್ಟರ್‌ಗಳಲ್ಲಿ ಹೇರಿಕೊಂಡು ಸಾವಿರಾರು ಮಂದಿ ಪಂಜಾಬ್ ರೈತರು ಪೊಲೀಸ್ ರಕ್ಷಣಾ ಕೋಟೆಗಳನ್ನು ಭೇದಿಸಿಕೊಂಡು ದೆಹಲಿಯ ಸನಿಹಕ್ಕೆ ಬಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಜಾಥಾ ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಲ್ಲದೇ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದರು. ಆದರೆ ಕೊರೆಯವ ಚಳಿಯ ನಡುವೆಯೂ ಇವೆಲ್ಲವನ್ನೂ ಭೇದಿಸಿ ರೈತರ ಜಾಥಾ ಮುನ್ನಡೆದಿದೆ. "ಇಂದು ಸಂಜೆ ವೇಳೆಗೆ 50 ಸಾವಿರಕ್ಕೂ ಹೆಚ್ಚು ರೈತರು ದೆಹಲಿಯ ಗಡಿ ತಲುಪಲಿದ್ದಾರೆ" ಎಂದು ಎರಡು ರೈತ ಸಂಘಟನೆಗಳು ಹೇಳಿವೆ.

"ಸಂಜೆ ವೇಳೆಗೆ ದೆಹಲಿ ಗಡಿಯಲ್ಲಿ 50 ಸಾವಿರ ರೈತರು ಇರುತ್ತಾರೆ. ರಾತ್ರಿ ವೇಳೆಗೆ ಸಂಖ್ಯೆ ಮತ್ತಷ್ಟು ಹೆಚ್ಚಲಿದ್ದು, ಸಾವಿರಾರು ಟ್ರ್ಯಾಕ್ಟರ್ ಮತ್ತು ಟ್ರಾಲಿಗಳಲ್ಲಿ ರೈತರು, ಮಹಿಳೆಯರು ಮತ್ತು ಮಕ್ಕಳು ಪಂಜಾಬ್‌ನಿಂದ ಆಗಮಿಸುತ್ತಿದ್ದಾರೆ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೇಳಿಕೆ ನೀಡಿದೆ. ಕೇಂದ್ರ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ವರೆಗೆ ವಾಪಸ್ಸಾಗುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತರು ದೊಡ್ಡ ಪ್ರಮಾಣದಲ್ಲಿ ದೆಹಲಿ ಗಡಿ ತಲುಪುತ್ತಿರುವ ನಡುವೆಯೇ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News