ವೀರಶೈವ-ಲಿಂಗಾಯತ ಸಮುದಾಯ ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಶಿಫಾರಸ್ಸು ತಾತ್ಕಾಲಿಕ ಮುಂದೂಡಿಕೆ

Update: 2020-11-27 11:37 GMT

ಬೆಂಗಳೂರು, ನ. 27: ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡುವ ಕುರಿತ ವಿಚಾರವನ್ನು ಸಮುದಾಯದ ಕೆಲ ಉಪಜಾತಿಗಳು ಹಾಗೂ ಒಕ್ಕಲಿಗ ಸಮುದಾಯ ಕೆಲ ಜಾತಿಗಳನ್ನು ಸೇರ್ಪಡೆ ಮಾಡಬೇಕಿರುವುದರಿಂದ ಈ ವಿಷಯವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಗೆ ಸೇರುವುದು ಮಹಾ ಅಪರಾಧವೇ? ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ವೀರಶೈವ-ಲಿಂಗಾಯತ ಸಮುದಾಯ ಶೈಕ್ಷಣಿಕವಾಗಿ ಮೀಸಲಾತಿಯ ಅವಕಾಶ ಪಡೆದುಕೊಳ್ಳುವುದು ಅಪರಾಧವೆಂಬಂತೆ ಏಕೆ ನೋಡಲಾಗುತ್ತಿದೆ? ಎಂದ ಸಚಿವ ಮಾಧುಸ್ವಾಮಿ, ಮುಂದುವರಿದ ಸಮುದಾಯಗಳಲ್ಲಿನ ಕೆಲ ಉಪಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗುಳಿದಿವೆ. ಹೀಗಾಗಿ ಅವುಗಳನ್ನು ಪರಿಶೀಲಿಸಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಮತ್ತಷ್ಟು ಅಧ್ಯಯನದ ಅಗತ್ಯವಿದೆ. ಅಲ್ಲದೆ, ಈ ಕುರಿತು ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ ಎಂದ ಅವರು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಹೊಸದಿಲ್ಲಿಯ ಪಕ್ಷದ ವರಿಷ್ಠರು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದ ಮಾಧುಸ್ವಾಮಿ, ನಾನು ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ಸೇರಿದಂತೆ ತುಮಕೂರು, ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿರುವ ಕುಂಚಿಟಿಗ ಸಮುದಾಯ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗುಳಿದಿದೆ. ಕುಂಚಿಟಿಗ, ವೀರಶೈವ-ಲಿಂಗಾಯತ ಸೇರಿದಂತೆ ಬಿಟ್ಟು ಹೋಗಿರುವ ಉಪಜಾತಿಗಳನ್ನು ಪರಿಶೀಲಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡುವ ವಿಚಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರ್ಪಡೆ ಸಂಬಂಧ 1999ರಿಂದಲೂ ವೀರಶೈವ ಮಹಾಸಭಾ ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ಈ ಸಮುದಾಯ ಯಾವುದೇ ಮೀಸಲಾತಿಗೆ ಒತ್ತಾಯಿಸುತ್ತಿಲ್ಲ. ಬದಲಿಗೆ ಕೇಂದ್ರ ಸರಕಾರದ ಕೋಟಾದಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಕ್ಕಾಗಿ ಆಗ್ರಹಿಸುತ್ತಿದೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಮಾಲೋಚನೆ ನಡೆಸಿದ್ದೇನೆ. ಒಂದೆರಡು ದಿನಗಳಲ್ಲಿ ಸಚಿವರ ಪಟ್ಟಿ ಕಳುಹಿಸಿ ಕೊಡಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದು, ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ ಇದೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News