×
Ad

ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯಿಸಿ ಡಿಸಿ ಕಚೇರಿ ಆವರಣದಲ್ಲಿ ಕ್ಯಾಂಪಸ್ ಫ್ರಂಟ್ ಧರಣಿ

Update: 2020-11-27 17:42 IST

ಶಿವಮೊಗ್ಗ, ನ.27: ಮಂಜೂರಾಗದೇ ಬಾಕಿ ಇರುವ ಎಲ್ಲ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಪ್ರಿ ಮೆಟ್ರಿಕ್ , ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಮೊದಲಾದ ಯೋಜನೆಯಡಿ ಸ್ಕಾಲರ್‌ಶಿಫ್ ನೀಡಲಾಗುತ್ತಿದೆ. ಆದರೆ ಕಳೆದ ವರ್ಷದಿಂದ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕೆಲವರಿಗೆ ಸ್ಕಾಲರ್ ಶಿಫ್ ಮಂಜೂರಾದರೂ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ ಎಂದು ದೂರಿದರು. ಕಡಿತಗೊಳಿಸಿರುವ ಅಲ್ಪಸಂಖ್ಯಾತ ಇಲಾಖೆಯ ಪಿಹೆಚ್‌ಡಿ, ಎಂಫಿಲ್ ಫೆಲೋಶಿಪ್ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಈ ಮೊದಲು ಅಲ್ಪಸಂಖ್ಯಾತ ಇಲಾಖೆಯಿಂದ ಪ್ರತಿ ವರ್ಷ ಪಿಹೆಚ್‌ಡಿ ಮತ್ತು ಎಂಫಿಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ನಿರ್ವಹಣಾ ವೆಚ್ಚ ನೀಡಲಾಗುತ್ತಿತ್ತು. ಪ್ರೋತ್ಸಾಹ ಧನ ಕಡಿತಗೊಳಿಸಿ ವಾರ್ಷಿಕ ನಿರ್ವಹಣಾ ವೆಚ್ಚ ಹಿಂಪಡೆಯಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ದೂರಿದರು.

ಸ್ಕಾಲರ್‌ಶಿಫ್ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು. ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು. ಮಂಜೂರಾಗದೇ ಉಳಿದ ಎಲ್ಲ ಮಾದರಿಯ ವಿದ್ಯಾರ್ಥಿ ವೇತನ ಶೀಘ್ರ ಬಿಡುಗಡೆ ಮಾಡಬೇಕು. ಕಡಿತಗೊಳಿಸಲಾದ ಪಿಹೆಚ್‌ಡಿ ಫೇಲೋಶಿಪ್ ಆದೇಶ ಹಿಂಪಡೆಯಬೇಕು. ವಿದ್ಯಾರ್ಥಿ ವೇತನ ದುರುಪಯೋಗವಾಗುತ್ತಿರುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಮುಜಾಯಿದ್, ರಾಜ್ಯ ಉಪಾಧ್ಯಕ್ಷ ಆರೀಫ್, ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ರೋಷನ್, ಜಬೀವುಲ್ಲಾ, ಇಲಿಯಾಸ್ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News