ಯೋಗೀಶ್‍ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಡಿ.4ಕ್ಕೆ ಮುಂದೂಡಿಕೆ

Update: 2020-11-27 12:41 GMT

ಧಾರವಾಡ, ನ.27: ಧಾರವಾಡ ಜಿಪಂ ಸದಸ್ಯ ಯೋಗೀಶ್‍ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಧಾರವಾಡದ 3ನೆ ಹೆಚ್ಚುವರಿ ಕೋರ್ಟ್ ಡಿ.4ಕ್ಕೆ ಮುಂದೂಡಿದೆ.

ಜಾಮೀನು ಕೋರಿ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 3ನೆ ಹೆಚ್ಚುವರಿ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಕೀಲರು ವಾಪಸ್ ಪಡೆದಿದ್ದರು. ಇದೀಗ ಹೊಸ ಜಾಮೀನು ಅರ್ಜಿಯನ್ನು ವಿನಯ ಕುಲಕರ್ಣಿ ಪರ ವಕೀಲರು ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆ ವಿಚಾರಣೆಯನ್ನು ಡಿ.4ಕ್ಕೆ ನ್ಯಾಯಾಲಯ ಮುಂದೂಡಿದೆ.

ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತಕರಾರು ಸಲ್ಲಿಕೆಗೆ ಸಿಬಿಐ ಪರ ವಕೀಲರಿಗೆ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ತಕರಾರು ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯ ಡಿ.4ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಯೋಗೇಶ್‍ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿಯವರನ್ನು ಬಂಧಿಸಿದ್ದರು. ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನದ ವಶಕ್ಕೆ ನೀಡಿ ಆದೇಶ ನೀಡಿತ್ತು. 

ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ವಿಸ್ತರಿಸಿತ್ತು. ಧಾರವಾಡದ 3ನೆ ಹೆಚ್ಚುವರಿ ಸೆಷನ್ ನ್ಯಾಯಾಲಯದಲ್ಲಿ ನ.23ರಂದು ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ವಿಚಾರಣೆ ಇತ್ತು. ಈ ವೇಳೆ ಸಿಬಿಐ ಅಧಿಕಾರಿಗಳು ಕೋರ್ಟಿಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದರು. ಹೀಗಾಗಿ ಹಿಂಡಲಗಾ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ವಿನಯ್ ವಿಚಾರಣೆಗೆ ಹಾಜರಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News