ಈ ಬಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸದಿರಲು ರಾಜ್ಯ ಸರಕಾರ ನಿರ್ಧಾರ

Update: 2020-11-27 15:02 GMT

ಬೆಂಗಳೂರು, ನ.27: ಶಾಲೆ ಆರಂಭದ ಅನಿಶ್ಚಿತತೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯ ಸರಕಾರ ಈ ವರ್ಷ ಸೈಕಲ್ ಖರೀದಿಯನ್ನು ಕೈ ಬಿಡಲು ನಿರ್ಧರಿಸಲಾಗಿದೆ.

ಇತ್ತೀಚಿಗೆ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಯಿತು. ಈ ವೇಳೆ ಸಮವಸ್ತ್ರ, ಪಠ್ಯಪುಸ್ತಕ ನೀಡಿ ಸೈಕಲ್‍ಗಳನ್ನು ಮುಂದಿನ ವರ್ಷ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮವಸ್ತ್ರಕ್ಕಾಗಿ ಟೆಂಡರ್ ಕರೆದು ರಾಜ್ಯ ಸರಕಾರ ಸ್ವಾಮ್ಯದ ಕಂಪನಿ ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ(ಕೆಎಚ್‍ಡಿಸಿ) ಮತ್ತು ಇತರೆ ಖಾಸಗಿ ಸಂಸ್ಥೆಗಳಿಗೆ ಕಾರ್ಯಾದೇಶವನ್ನು ನೀಡಲಾಗಿದೆ. ಆದರೆ, ಸೈಕಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿರಲಿಲ್ಲ. ಈ ಬಾರಿ ಎಂದಿನಂತೆ ಶಾಲೆ ಆರಂಭಿಸುತ್ತೇವೆ ಎಂಬುದರ ಬಗ್ಗೆ ಇಲಾಖೆಗೆ ಸ್ಪಷ್ಟತೆಯಿಲ್ಲದೇ ಇರುವುದರಿಂದ ಸೈಕಲ್ ನೀಡದೇ ಇರುವುದು ಉತ್ತಮ ಎಂಬ ತೀರ್ಮಾನ ಕೈಗೊಳ್ಳಲಾಗಿದೆ.

ಬಜೆಟ್ ಎಷ್ಟು: 2019-20ನೇ ಸಾಲಿನಲ್ಲಿ ಬೈಸಿಕಲ್ ಖರೀದಿಗೆ 180 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿತ್ತು. ಒಂದು ವೇಳೆ ಸೈಕಲ್ ಜತೆಗೆ ಶೂ ಮತ್ತು ಸಾಕ್ಸ್ ನೀಡುವುದನ್ನು ರದ್ದು ಮಾಡಿದರೆ ಅಂದಾಜು 300 ಕೋಟಿ ಹಣ ಸರಕಾರಕ್ಕೆ ಉಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News