ರಾಜ್ಯದ ಬಿಜೆಪಿ ಸಂಸದರ ಜೊತೆ ಸಿಎಂ ಯಡಿಯೂರಪ್ಪ ಸಭೆ

Update: 2020-11-27 15:32 GMT

ಬೆಂಗಳೂರು, ನ.27: ಕೇಂದ್ರ ಸರಕಾರದ ಯೋಜನೆಗಳು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ರಾಜ್ಯದ ಕೆಲಸಗಳು ಕೇಂದ್ರದ ಮಟ್ಟದಲ್ಲಿ ಸರಾಗವಾಗಿ ಆಗುವಂತೆ ಸಂಸದರು ಹೆಚ್ಚಿನ ಆಸಕ್ತಿ ವಹಿಸಬೇಕು. ಇದಕ್ಕಾಗಿ, ರಾಜ್ಯ ಸರಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಸಂಸದರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಬಿಜೆಪಿ ಸಂಸದರ ಸಭೆ ನಡೆಸಿದ ಮುಖ್ಯಮಂತ್ರಿ, ಭತ್ತ ಕಟಾವಿಗೆ ಬಂದಿದ್ದು, ಕೇಂದ್ರ ಸರಕಾರದ ಜೊತೆ ಚರ್ಚೆ ಮಾಡಿ, ರಾಜ್ಯಕ್ಕೆ ಹೆಚ್ಚಿನ ಖರೀದಿ ಕೋಟಾ ಲಭ್ಯವಾಗುವಂತೆ ಮಾಡಬೇಕು. ಅಲ್ಲದೆ, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವಸತಿ ಇಲಾಖೆಗೂ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದರೆ, ನಿಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಮನೆಗಳು ಸಿಗುತ್ತವೆ. ಇನ್ನು ಮುಂದೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ನಿಮ್ಮೊಂದಿಗೆ ಸಭೆ ನಡೆಸಿ, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ರಾಜ್ಯ ಸರಕಾರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೊಣ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇಂದ್ರ ಸರಕಾರದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯಾವ ಯಾವ ಕೆಲಸಗಳು ಆಗಬೇಕು ಎಂಬುದರ ಬಗ್ಗೆ ನಮಗೆ ಲಿಖಿತ ಮಾಹಿತಿಯನ್ನು ನೀಡಿದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಪ್ರಧಾನಿ ಸೇರಿದಂತೆ ಇನ್ನಿತರ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಲು ನಾವು ಸಿದ್ಧವಾಗಿದ್ದೇವೆ ಎಂದು ಸಂಸದರು, ಮುಖ್ಯಮಂತ್ರಿಗೆ ಅಭಯ ನೀಡಿದರು.

ಕೇಂದ್ರ ಸರಕಾರದ ಬಜೆಟ್ ಪೂರ್ವ ಸಭೆಗಳು ಇನ್ನು ಕೆಲವೆ ದಿನಗಳಲ್ಲಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸಂಸದರಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಅಲ್ಲದೆ, ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಯಾವ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಮಾಹಿತಿ ವಿನಿಮಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಅರ್ಧ ಗಂಟೆ ಸಭೆ: ರಾಜ್ಯದ ಬಿಜೆಪಿ ಸಂಸದರೊಂದಿಗೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಭೆ ಕರೆದಿದ್ದರು. ಆದರೆ, ಕೇವಲ 11 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ, ಅರ್ಧ ಗಂಟೆಯಲ್ಲೆ ಸಭೆ ಮುಕ್ತಾಯಗೊಳಿಸಲಾಯಿತು ಎಂದು ತಿಳಿದು ಬಂದಿದೆ.

ಶಿವಕುಮಾರ್ ಉದಾಸಿ, ಅಮರೇಶ ನಾಯ್ಕ್, ಕರಡಿ ಸಂಗಣ್ಣ, ದೇವೇಂದ್ರಪ್ಪ, ಜಿ.ಎಸ್.ಬಸವರಾಜು, ಬಿ.ವೈ.ರಾಘವೇಂದ್ರ, ಡಾ.ಉಮೇಶ್ ಜಾಧವ್, ಪಿ.ಸಿ.ಗದ್ದಿಗೌಡರ್, ಪ್ರತಾಪ್ ಸಿಂಹ, ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ ಹಾಗೂ ಡಾ.ಕೆ.ನಾರಾಯಣ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News