ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಿದರೆ ಹೋರಾಟ: ಹಿರೇಮಗಳೂರು ಗ್ರಾಮಸ್ಥರಿಂದ ಎಚ್ಚರಿಕೆ

Update: 2020-11-27 16:05 GMT

ಚಿಕ್ಕಮಗಳೂರು, ನ.27: ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಹಿರೇಮಗಳೂರಿನ ಗ್ರಾಮಸ್ಥರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಹಾಯಕ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿ, ಕಳೆದ 1 ವರ್ಷದಿಂದ ಕೊರೋನ ವೈರಸ್‍ನಿಂದಾಗಿ ರಾಜ್ಯಾದ್ಯಂತ ಬಡವರು, ರೈತರು ಕೂಲಿ ಕಾರ್ಮಿಕರು ಆರ್ಥಿಕವಾಗಿ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ರಾಜ್ಯ ಸರಕಾರ ಮುಂದಾಗಿರುವುದು ಖಂಡನೀಯ ಎಂದರು.

ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ರೈತರು ಹಣ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ, ಅವರ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತವೆ ಎಂದು ಎಚ್ಚರಿಸಿರುವ ಅವರು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಬಾರದು. ಸರಕಾರ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಿದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಮನವಿಯಲ್ಲಿ ಎಚ್ಚರಿದ್ದಾರೆ.

ಗ್ರಾಮಸ್ಥರಾದ ಹಿರೇಮಗಳೂರು ರಾಮಚಂದ್ರ, ಎಚ್.ಎಸ್.ರವಿಕುಮಾರ್, ಧರ್ಮರಾಜ್, ದೇವರಾಜ್, ಪ್ರಸಾದ್, ಮೋಹನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News