ಮೈಸೂರು: ದಿಲ್ಲಿಯಲ್ಲಿ ರೈತರ ಮೇಲಿನ ಬಲಪ್ರಯೋಗ ಖಂಡಿಸಿ ರಸ್ತೆ ತಡೆ, ಪ್ರತಿಭಟನೆ

Update: 2020-11-27 16:21 GMT

ಮೈಸೂರು,ನ.27: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ರೈತರು ದಿಲ್ಲಿ ಚಲೋ ನಡೆಸುವ ವೇಳೆ ರೈತರ ಮೇಲೆ ಬಲಪ್ರಯೋಗ, ಜಲಫಿರಂಗಿ ನಡೆಸಿವುದನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಗನ್‍ಹೌಸ್ ಬಳಿಯ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಜಮಾಯಿಸಿದ ರೈತ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ದೇಶದ ರೈತರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇಟ್ಟು ಭಾರೀ ಬಹುಮತ ನೀಡಿ ಗೆಲ್ಲಿಸಿದ್ದರು. ಆದರೆ ಇಂದು ಮೋದಿಯವರು ರೈತರ  ಮರಣಶಾಸನ ಬರೆಯುವ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು ತಂತ್ರಗಾರಿಕೆ ರೂಪಿಸಲಾಗಿದೆ. ಸತತ ನಾಲ್ಕು ತಿಂಗಳುಗಳು ರೈತರು ಹೋರಾಟ ನಡೆಸುತ್ತಿದ್ದರೂ ಸೌಜನ್ಯಕ್ಕೂ ಮಾತುಕತೆ ನಡೆಸದ ಮೋದಿ ಅವರು ಸಿನಿಮಾ ನಟರು, ಕ್ರಿಕೆಟ್ ಆಟಗಾರರು, ಉದ್ಯಮಿಗಳ ಜೊತೆ ಸಭೆ ನಡೆಸಲು ಮಾತುಕತೆ ನಡೆಸಲು ಸಮಯವಿದೆ. ಆದರೆ ರೈತ ಮುಖಂಡರುಗಳ ಜೊತೆ ಮಾತುಕತೆ ನಡೆಸಲು ಸಮಯವಿಲ್ಲ ಎಂದು ಕಿಡಿಕಾರಿದರು.

2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುತ್ತೇನೆ ಎನ್ನುತ್ತಾರೆ. ಆದರೆ ರೈತರ ಆಧಾಯ ದ್ವಿಗುಣವಾಗುವುದಕ್ಕಿಂತ ಪ್ರಧಾನಿಗೆ ಆಪ್ತರಾಗಿರುವ ಅದಾನಿ, ಅಂಬಾನಿ ಅವರ ಆಧಾಯ ದ್ವಿಗುಣವಾಗುತ್ತಿದೆ. ಕೊರೋನ ಸಂಕಷ್ಟ ಸಮಯದಲ್ಲಿ ರೈತರ ರಕ್ಷಣೆ ಮಾಡಬೇಕಾದ ಸರಕಾರ ರೈತರ ನಾಶಗೊಳಿಸುವ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರ ವಿರುದ್ಧ ದೇಶದ ಎಲ್ಲಾ ರೈತ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತಿವೆ. ರಾಷ್ಟ್ರಮಟ್ಟದ ಹೋರಾಟವನ್ನು ಬೆಂಬಲಿಸಿ ನಾಳೆಯಿಂದ ರಾಜ್ಯಾದ್ಯಂತ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್, ಸಿದ್ದೇಶ, ಹಾಡ್ಯ ರವಿ, ವೆಂಕಟೇಶ್, ಮಹಾದೇವಸ್ವಾಮಿ, ಕೆಂಡಗಣ್ಣಸ್ವಾಮಿ, ಮಂಜುನಾಥ್, ಬರಡನಪುರ ನಾಗರಾಜ್, ಗೌರಿಶಂಕರ್, ಸುರೇಶ್, ರಂಗರಾಜ್, ಕೃಷ್ಣೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News