ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Update: 2020-11-27 16:55 GMT

ಚಿಕ್ಕಮಗಳೂರು, ನ.27: ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದ ಆವರಣದಲ್ಲಿರುವ ಮಸೀದಿ ಬಳಿಯ ಧ್ವನಿವರ್ಧಕ ತೆಗೆಯುವಂತೆ ಕಳೆದ ನ.24ರಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಸ್ಥಳೀಯರಿಗೆ ತಾಕೀತು ಮಾಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದು, ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಶ್ರೀರಾಮಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ನ.24ರಂದು ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದ ಆವರಣದಲ್ಲಿರುವ ಮಸೀದಿ ಬಳಿ ಹೋಗಿ ಅಲ್ಲಿನ ನಮಾಝ್ ಮಾಡುತ್ತಿದ್ದವರಿಗೆ "ನಿಮಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದವರು ಯಾರು? ಎಂದು ಪ್ರಶ್ನಿಸಿ ಮೈಕ್ ತೆರವು ಮಾಡಲು ಬೆದರಿಸಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸಲು ಪ್ರಚೋದನೆ ನೀಡಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದ ವಿವಾದ ಸಂಬಂಧ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 1975ಕ್ಕೂ ಹಿಂದೆ ಇದ್ದ ಧಾರ್ಮಿಕರ ಆಚರಣೆಗಳ ಬಗ್ಗೆ ಪರಿಶೀಲನೆ ನಡೆಸಿ 1985 ಮತ್ತು 1989ರಲ್ಲಿ ಆದೇಶ ಹೊರಡಿಸಿದ್ದಾರೆ. ಅದರಂತೆ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾದ ಶಾಖಾದ್ರಿ ಧರ್ಮಾಧಿಕಾರಿಯಾಗಿದ್ದು, ಸೂಫಿ ಸಂತತಿಯ ಉರೂಸ್ ಆಚರಣೆ ಹೊರತು ಪಡಿಸಿ ದತ್ತಮಾಲೆ,  ದತ್ತಜಯಂತಿಯಂತಹ ಯಾವುದೇ ಹೊಸ ಆಚರಣೆಗೆ ಅವಕಾಶವಿಲ್ಲ ಎಂದು ದೃಢಪಡಿಸಿತ್ತು. ಆದರೂ ಸಂಘಪರಿವಾರದವರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾವನ್ನು ಕೇಸರೀಕರಣ ಮಾಡಲು ಒಂದಿಲ್ಲೊಂದು ಹೊಸ ಆಚರಣೆ ಮಾಡಲಾರಂಭಿಸಿದ್ದಾರೆ. ಇಂತಹ ಆಚರಣೆಗಳ ಸಂದರ್ಭ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಮನವಿಯಲ್ಲಿ ಮುಖಂಡರು ಆರೋಪಿಸಿದ್ದಾರೆ.

ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಆವರಣದಲ್ಲಿ ಮಸೀದಿ ಇದ್ದು, ಇಲ್ಲಿ ಸ್ಥಳೀಯರು ನಮಾಝ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ಧತಿಯಾಗಿದೆ. ಆದರೆ ಶ್ರೀರಾಮಸೇನೆಯ ಮುಖಂಡರು ಮಸೀದಿಯ ಧ್ವನಿವರ್ಧಕವನ್ನು ತೆರವು ಮಾಡಲು ಸ್ಥಳೀಯರಿಗೆ ಬೆದರಿಕೆಯೊಡ್ಡಿ ಗಲಭೆಗೆ ಕುಮ್ಮಕ್ಕು ನೀಡಲು ಮುಂದಾಗಿದ್ದಾರೆ. ಜಿಲ್ಲಾಡಳಿತ ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಶ್ರೀರಾಮಸೇನೆಯ ಮುಖಂಡರ ಅಣತಿಯಂತೆ ಧ್ವನಿವರ್ಧಕವನ್ನು ತೆರವು ಮಾಡಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಿರುವ ಮುಖಂಡರು, ಕೋಮುಗಲಭೆಗೆ ಪ್ರಚೋದನೆ ನೀಡಿರುವ ಶ್ರೀರಾಮಸೇನೆಯ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಕಾನೂನು ಜರುಗಿಸಬೇಕು ಹಾಗೂ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ಯಾವುದೇ ರೀತಿಯ ಭಯದ ವಾತಾವರಣ ಇಲ್ಲದಂತೆ ಮುಕ್ತ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಂವಿಧಾನ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗೌಸ್ ಮೊಹಿದ್ದೀನ್, ಸಂಚಾಲಕ ನೀಲಗುಳಿ ಪದ್ಮನಾಭ, ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಪಿಎಫ್‍ಐ ಜಿಲ್ಲಾಧ್ಯಕ್ಷ ಚಾಂದ್‍ ಪಾಶ, ಕೋಮುಸೌಹಾರ್ದ ವೇದಿಕೆ ಮುಖಂಡ ಗೌಸ್ ಮುನೀರ್, ಅಂಜಮನ್ ಇ ಇಸ್ಲಾಮಿಯಾ ಸಂಘದ ಮೊಹಸಿನ್, ನವ್ ಜವಾನ್ ಕಮಿಟಿಯ ಅರ್ಬಾಝ್, ಎಸ್‍ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಅಜ್ಮತ್ ಪಾಶ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News