ಮಹಿಳೆಯ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2020-11-27 17:00 GMT

ಚಾಮರಾಜನಗರ, ನ.27: ಹಣದ ವಿಚಾರವಾಗಿ ಜಗಳವಾಡಿ ನಿಂದಿಸುತ್ತಿದ್ದ ಕಾರಣಕ್ಕಾಗಿ ಹಲ್ಲೆ ನಡೆಸಿ ಮಹಿಳೆಯೊಬ್ಬರ ಕೊಲೆಗೈದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್ ಪುರಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತೆರಕಣಾಂಬಿ ಗ್ರಾಮದ ಆನಂದ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಅದೇ ಗ್ರಾಮದ ರತ್ನಮ್ಮ ಎಂಬವರ ಮೇಲೆ ಕಳೆದ 2016ರ ಫೆಬ್ರವರಿ 13ರಂದು ತೀವ್ರವಾಗಿ ಹಲ್ಲೆ ಮಾಡಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ವೇಳೆ ರತ್ನಮ್ಮ ಮೃತಪಟ್ಟಿದ್ದರು. 

ಆನಂದ ಮೃತ ರತ್ನಮ್ಮ ಅವರ ಪತಿಯಿಂದ ಸಾಲ ಪಡೆದಿದ್ದು, ಅದನ್ನು ಹಿಂದಿರುಗಿಸುವ ವೇಳೆ ರತ್ನಮ್ಮ ಹಾಗು ಆನಂದ ನಡುವೆ ಜಗಳವಾಗಿತ್ತು. 2016ರ ಫೆಬ್ರವರಿ 13ರಂದು ರತ್ನಮ್ಮ ಹಾಗೂ ತೆರಕಣಾಂಬಿ ಗ್ರಾಮದ ಚಿನ್ನಮ್ಮ ಅವರು ತೆರಕಣಾಂಬಿ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರತ್ನಮ್ಮಳ ಮೇಲೆ ಆನಂದ ತೀವ್ರವಾಗಿ ಹಲ್ಲೆ ಮಾಡಿದ್ದ. ಅಲ್ಲದೆ ಚಿನ್ನಮ್ಮ ಅವರಿಗೂ ಕೊಲೆ ಬೆದರಿಕೆ ಹಾಕಿದ್ದ. ಹಲ್ಲೆಯಿಂದಾಗಿ ರತ್ನಮ್ಮ ಮೃತಪಟ್ಟಿದ್ದರು. 

ಈ ಹಿನ್ನೆಲೆಯಲ್ಲಿ ಆರೋಪಿಯು ಕೊಲೆ ಎಸಗಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್ ಪುರಿ ಅವರು ಆರೋಪಿ ಆನಂದನಿಗೆ ಜೀವಾವಧಿ ಶಿಕ್ಷೆ ಹಾಗೂ 6,500 ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News