ಮನೆಗಳ್ಳತನ ಪ್ರಕರಣ: ಚಿನ್ನಾಭರಣ, ನಗದು ಸಹಿತ ಆರೋಪಿ ಬಂಧನ

Update: 2020-11-27 17:17 GMT

ಮಡಿಕೇರಿ, ನ.27: ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನಿಂದ 70 ಸಾವಿರ ರೂ.ನಗದು, 285 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸಹಿತ 13.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆದ್ರಿಹಳ್ಳಿ ಗ್ರಾಮದ ಆಂಜಿನಿಯಪ್ಪ ಎಂಬವರ ಪುತ್ರ, ಪ್ರಸಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ವಾಸಿಸುತ್ತಿದ್ದ ಎ.ಸುರೇಶ ಅಲಿಯಾಸ್ ಸೂರಿ (22) ಎಂದು ಗುರುತಿಸಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇನ ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ಪೊಲೀಸರು, ಅಕ್ಟೋಬರ್ ಕೊನೆಯ ವಾರದಲ್ಲಿ ಸೋಮವಾರಪೇಟೆ ಠಾಣೆ ವ್ಯಾಪ್ತಿಯ  ಬಿಳಕಿಕೊಪ್ಪ ಗ್ರಾಮದಲ್ಲಿ ನಡೆದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ್ದು, ಈ ಸಂದರ್ಭ ಚಂದಾಪುರದಲ್ಲಿದ್ದ ಸುರೇಶ್‍ನನ್ನು ಕರೆತಂದು ತೀವ್ರ ವಿಚಾರಣೆ ನಡೆಸಿದಾಗ, ಆತ ತಾನು ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ

ಅದರಂತೆ ಆತನನ್ನು ಬಂಧಿಸಿದ ಪೊಲೀಸರು ಆತನಿಂದ 70 ಸಾವಿರ ರೂ.ನಗದು, ಹತ್ತು ಪ್ರಕರಣಗಳಿಗೆ ಸಂಬಂಧಿಸಿ 285 ಗ್ರಾಂ. ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಸೇರಿದಂತೆ 13.35 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಈ ಹಿಂದೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದಾಗಿಯೂ ಹೇಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಮತ್ತು ಉಪ ಅಧೀಕ್ಷಕ ಹೆಚ್.ಎಂ.ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಸೋಮವಾರಪೇಟೆ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಶನಿವಾರಸಂತೆ ಠಾಣಾಧಿಕಾರಿ ಹೆಚ್.ಇ.ದೇವರಾಜು, ಶನಿವಾರಸಂತೆ ಠಾಣೆಯ ಸಿಬ್ಬಂದಿಗಳಾದ ಮುರಳಿ, ಲೋಕೇಶ್, ಹರೀಶ್, ಪ್ರದೀಪ್, ಡಿಂಪಲ್, ಸೋಮವಾರಪೇಟೆ ಠಾಣೆ ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ, ಅನಂತಕುಮಾರ್, ಮಂಜುನಾಥ್,ಕುಮಾರಸ್ವಾಮಿ, ನಡಾಫ್, ಮಧು, ಜಗದೀಶ್, ನವೀನ್‍ಕುಮಾರ್, ಹರ್ಷಿತ್, ಸೋಮವಾರಪೇಟೆ ಉಪ ವಿಭಾಗದ ಅಪರಾಧ ಪತ್ತೆ ಸಿಬ್ಬಂದಿಗಳಾದ ದಯಾನಂದ, ಸಜಿ, ಪ್ರಕಾಶ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು, ಕೊಡಗು ಜಿಲ್ಲೆಯ ಸಾರ್ವಜನಿಕರು ತಾವು ಮನೆಬಿಟ್ಟು ತೆರಳುವ ಸಂದರ್ಭ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮತ್ತು ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರ್‍ಗಳಲ್ಲಿ ಸುರಕ್ಷಿತವಾಗಿ ಇಡುವುದರೊಂದಿಗೆ ಮನೆಗಳ್ಳತನ ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News