ಅಪ್ರಾಪ್ತೆಯ ಅಪಹರಣ ಪ್ರಕರಣ: ಮಹಿಳೆ ಸೇರಿ ಇಬ್ಬರ ಬಂಧನ

Update: 2020-11-27 17:24 GMT

ಮಡಿಕೇರಿ, ನ.27: ಅಪ್ರಾಪ್ತೆಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕ ಹಾಗೂ ಆತನ ಚಿಕ್ಕಮ್ಮಳನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. 

ಪಟ್ಟಣದ ಕೆ.ಬೋಯಿಕೇರಿ ಗ್ರಾಮದ ಜಯಪ್ರಕಾಶ್ ಅಲಿಯಾಸ್ ವೆಂಕಟೇಶ್(31) ಹಾಗೂ ಆತನ ಚಿಕ್ಕಮ್ಮ ಸೀತಮ್ಮ(48) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಿರಾಜಪೇಟೆ ಹೊರ ವಲಯದ ಅಪ್ರಾಪ್ತೆ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ನ.21ರಂದು ಮನೆಯಿಂದ ಏಕಾಏಕಿ ಕಾಣೆಯಾಗಿದ್ದಳು. ಆಕೆಯ ಅಜ್ಜಿ ಎಲ್ಲಾ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರೂ ಎಲ್ಲಿಯೂ ಪತ್ತೆಯಾಗಲಿಲ್ಲ. ಬಳಿಕ ನ.23ರಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮೊಮ್ಮಗಳು ಕಾಣೆಯಾಗಿದ್ದಾಳೆ ಎಂದು ಅಜ್ಜಿ ದೂರು ನೀಡಿದ್ದರು. ಮಾತ್ರವಲ್ಲದೇ ಕೆಲವರ ಮೇಲೆ ಸಂದೇಹವಿದೆ ಎಂದು ಪೊಲೀಸರಿಗೆ ತಿಳಿಸಿದ್ದರು.

ಈ ನಡುವೆ ಅಪ್ರಾಪ್ತೆಯನ್ನು ಅಪಹರಿಸಿದ್ದ ಜಯಪ್ರಕಾಶ್ ತನ್ನ ಚಿಕ್ಕಮ್ಮ ಸೀತಮ್ಮ ಎಂಬಾಕೆಯ ಸಹಾಯದಿಂದ ಹೊರ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದ. ಅಪ್ರಾಪ್ತೆ ನಾಪತ್ತೆ ಪ್ರಕರಣದ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳು ಕೆ.ಆರ್.ನಗರದ ಹಂಪಲಾಪುರದಲ್ಲಿ ಅಪ್ರಾಪ್ತೆಯೊಂದಿಗೆ ಪತ್ತೆಯಾಗಿದ್ದಾರೆ. 

ವಿಚಾರಣೆಯ ಸಂದರ್ಭ ಅಪ್ರಾಪ್ತೆ ನೀಡಿದ ಹೇಳಿಕೆ ಆಧರಿಸಿ ಆರೋಪಿ ವೆಂಕಟೇಶ್‍ನ ವಿರುದ್ದ ಅಪಹರಣ ಮತ್ತು ಪೋಸ್ಕೋ ಕಾಯ್ದೆ, ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಸೀತಮ್ಮ ಎಂಬಾಕೆಯ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ನಿರ್ದೇಶನದಂತೆ ನಗರ ಠಾಣಾಧಿಕಾರಿ ಜಗದೀಶ್ ಧೂಳಶೆಟ್ಟಿ, ಎ.ಎಸ್.ಐ ಯು.ಟಿ. ಮಾದಯ್ಯ, ಸಿಬ್ಬಂದಿಗಳಾದ ಟಿ.ಟಿ.ಮಧು ಹಾಗೂ ಕಾವೇರಮ್ಮ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News