ಕಾರ್ಯನಿರತ ಪತ್ರಕರ್ತರಿಗೆ ಎರಡನೇ ಅತ್ಯಂತ ಅಪಾಯಕಾರಿ ದೇಶ ಯಾವುದು ಗೊತ್ತಾ?

Update: 2020-11-28 17:06 GMT

ಹೊಸದಿಲ್ಲಿ,ನ.28: ಕೋವಿಡ್-19 ಪಿಡುಗಿನಿಂದ ತತ್ತರಿಸಿರುವ ಭಾರತದ ಮುಖ್ಯವಾಹಿನಿ ಮಾಧ್ಯಮ ರಂಗವು ಈ ವರ್ಷ ಕಳವಳಕಾರಿ ಸಂಖ್ಯೆಯಲ್ಲಿ ಪತ್ರಕರ್ತರ ಹತ್ಯೆಗಳಿಗೆ ಸಾಕ್ಷಿಯಾಗಿದೆ. 2020ನೇ ವರ್ಷವು ಕೊನೆಗೊಳ್ಳುತ್ತಿರುವಂತೆ ಭಾರತವು ವಿಶ್ವದಲ್ಲಿ ಮೆಕ್ಸಿಕೋದ ಬಳಿಕ ವೃತ್ತಿಪರ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶವಾಗಿ ಪರಿಣಮಿಸಿದೆ. ವರ್ಷದ ಉತ್ತರಾರ್ಧದಲ್ಲಂತೂ ಸರಣಿಯೋಪಾದಿಯಲ್ಲಿ ಪತ್ರಕರ್ತರ ಕೊಲೆಗಳು ನಡೆದಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಹಕ್ಕುಗಳ ಸಂಸ್ಥೆ ಪ್ರೆಸ್ ಎಂಬ್ಲೆಮ್ ಕ್ಯಾಂಪೇನ್ (ಪಿಇಸಿ) ಬೆಟ್ಟು ಮಾಡಿದೆ.

 ಪತ್ರಕರ್ತರ ಕೊಲೆ ಸರಣಿಯಲ್ಲಿ ತಮಿಳು ಪತ್ರಿಕೆ ‘ವಿಳಂಗಂ’ಗಾಗಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಪತ್ರಕರ್ತ ಜಿ.ನಾಗರಾಜ್(45) ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ನ.22ರಂದು ತಮಿಳುನಾಡಿನ ಹೊಸೂರಿನಲ್ಲಿ ಗೂಂಡಾಗಳ ಗುಂಪೊಂದು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದೆ. ನಾಗರಾಜ್ ಅಖಿಲ ಭಾರತ ಹಿಂದು ಮಹಾಸಭಾದೊಂದಿಗೂ ಗುರುತಿಸಿಕೊಂಡಿದ್ದರು.

 ‘2020,ಜ.1ರಿಂದ ಈವರೆಗೆ ವಿಶ್ವಾದ್ಯಂತ 80 ಪತ್ರಕರ್ತರ ಹತ್ಯೆಗಳ ಜೊತೆಗೆ 56 ದೇಶಗಳಲ್ಲಿ ಕೊರೋನ ಸಂಬಂಧಿ 479 ಮಾಧ್ಯಮ ಪ್ರತಿನಿಧಿಗಳ ಸಾವುಗಳನ್ನು ನಾವು ದಾಖಲಿಸಿಕೊಂಡಿದ್ದೇವೆ. ಪತ್ರಕರ್ತರು ತಳಮಟ್ಟದಿಂದ ಮಾಹಿತಿಗಳನ್ನು ಒದಗಿಸುವ ಕಾರ್ಯವನ್ನು ಮಂದುವರಿಸಬೇಕಿರುವುದರಿಂದ ವಿಶ್ವಾದ್ಯಂತ ಪತ್ರಕರ್ತರ ಸುರಕ್ಷತೆಯು ಅಪಾಯದಲ್ಲಿದೆ. ಎಲ್ಲ ಮೃತ ಪತ್ರಕರ್ತರ ಕುಟುಂಬಗಳಿಗೆ ನಾವು ಸಂತಾಪಗಳನ್ನು ಸಲ್ಲಿಸುತ್ತಿದ್ದೇವೆ ’ಎಂದು ಪಿಇಸಿಯ ಮಹಾ ಕಾರ್ಯದರ್ಶಿ ಬ್ಲೇಸಿ ಲೆಂಪೆನ್ ಹೇಳಿದ್ದಾರೆ.

ನ.16ರಂದು ಉತ್ತರ ಪ್ರದೇಶದ ಸೋನಭದ್ರಾದಲ್ಲಿ ಗ್ರಾಮೀಣ ಪತ್ರಕರ್ತ ಉದಯ ಪಾಸ್ವಾನ್ ಮತ್ತು ಅವರ ಪತ್ನಿ ಶೀತಲಾ ಪಾಸ್ವಾನ್ ಅವರ ಹತ್ಯೆ ನಡೆದಿತ್ತು. ಇದಕ್ಕೂ ಮುನ್ನ ನ.12ರಂದು ಉತ್ತರ ಪ್ರದೇಶದ ಇನ್ನೋರ್ವ ಪತ್ರಕರ್ತ ಸೂರಜ್ ಪಾಂಡೆ ಅವರ ಶವವು ಸದರ ಕೋತ್ವಾಲಿ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಪತ್ತೆಯಾಗಿತ್ತು. ಉನ್ನಾವೊದಲ್ಲಿಯ ಅವರ ಕುಟುಂಬ ಸದಸ್ಯರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಅಸ್ಸಾಮಿನ ಕಾಕೋಪಥರ್‌ನ ಟಿವಿ ಪತ್ರಕರ್ತ ಪರಾಗ್ ಭುಯಾನ್ ಅವರು ನ.11ರಂದು ನಿಗೂಢ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಭೋಪಾಲದ ಟಿವಿ ವರದಿಗಾರ ಸೈಯದ್ ಆದಿಲ್ ವಹಾಬ್ ಅವರನ್ನು ನ.8ರಂದು ಅರಣ್ಯ ಪ್ರದೇಶವೊಂದರಲ್ಲಿ ಕೊಲೆ ಮಾಡಲಾಗಿದ್ದರೆ,ಅದೇ ದಿನ ತಮಿಳುನಾಡಿನ ಕಾಂಚೀಪುರಮ್‌ನಲ್ಲಿ ತಮಿಳು ಟಿವಿ ಪತ್ರಕರ್ತ ಇಸ್ರಾವೆಲ್ ಮೋಸಸ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇವು ಕೆಲವೇ ಘಟನೆಗಳಷ್ಟೇ. ಇವುಗಳ ಹೊರತಾಗಿಯೂ ಭಾರತದಲ್ಲಿ ಹಲವಾರು ಪತ್ರಕರ್ತರು ಹತ್ಯೆಯಾಗಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತವು ಈಗ ಕಾರ್ಯನಿರತ ಪತ್ರಕರ್ತರ ಪಾಲಿಗೆ ದ್ವಿತೀಯ ಅತ್ಯಂತ ಅಪಾಯಕಾರಿ ದೇಶವಾಗಿದೆ. ಈ ವರ್ಷ ಈವರೆಗೆ 12 ಪತ್ರಕರ್ತರ ಹತ್ಯೆಗಳು ದೃಢಪಟ್ಟಿವೆ. ಕಳೆದ ವರ್ಷ ಭಾರತದಲ್ಲಿ ಒಂಭತ್ತು ಸೇರಿದಂತೆ ವಿಶ್ವಾದ್ಯಂತ 75 ಪತ್ರಕರ್ತರು ಕೊಲೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News