ವೈದ್ಯಕೀಯ ಪರೀಕ್ಷೆಗಳ ಮುಂದೂಡಿಕೆ

Update: 2020-11-29 11:45 GMT

ಬೆಂಗಳೂರು, ನ. 29: ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿರುವ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಎಂಬಿಬಿಎಸ್ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸುವ ನಿರ್ಧಾರವನ್ನು ಕೈಬಿಟ್ಟಿದೆ.

ಜ.19 ರಿಂದ ಎಂಬಿಬಿಎಸ್ ಸೇರಿದಂತೆ ವೈದ್ಯಕೀಯ ಪರೀಕ್ಷೆಗಳು ನಡೆಸಲು ವಿವಿ ಮುಂದಾಗಿತ್ತು. ಆದರೆ, ವಿದ್ಯಾರ್ಥಿಗಳ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು 2021ನೆ ಮಾರ್ಚ್-ಎಪ್ರಿಲ್‍ನಲ್ಲಿ ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ ಎಂಬಿಬಿಎಸ್‍ನ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯು ಫೆಬ್ರವರಿ ಹಾಗೂ ಉಳಿದಂತೆ ದ್ವಿತೀಯ, ತೃತೀಯ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮಾರ್ಚ್-ಎಪ್ರಿಲ್‍ನಲ್ಲಿ ನಡೆಸಲು ವಿವಿ ಮುಂದಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲೇ ಪಾಠ ಪ್ರವಚನ ಮಾಡಲಾಗುತ್ತಿದ್ದು, ಕಳೆದ ವಾರವಷ್ಟೇ ಮೊದಲ ಹಂತವಾಗಿ ಪದವಿ, ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಿದೆ. ಇನ್ನು, ವೈದ್ಯಕೀಯ ಕಾಲೇಜು ಗಳು ಡಿ.1 ರಿಂದ ಆರಂಭವಾಗಬೇಕಿದೆ. ಈ ಮಧ್ಯೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ತರಾತುರಿಯಲ್ಲಿ ಜ.19 ರಿಂದ ಎಲ್ಲ ವೈದ್ಯಕೀಯ ಪರೀಕ್ಷೆಯನ್ನು ನಡೆಸುವ ಕುರಿತು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಹೆಚ್ಚಿನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಜನವರಿ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪರೀಕ್ಷೆಯನ್ನು ಮಾರ್ಚ್‍ಗೆ ಮುಂದೂಡಿದೆ.

ಇದರಿಂದ ವೈದ್ಯಕೀಯ ಶಿಕ್ಷಣ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕನಿಷ್ಠ ಎರಡರಿಂದ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ. ಪರೀಕ್ಷಾ ವೇಳಾಪಟ್ಟಿ ಜತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಗೆ ಇದ್ದ ಕಾಲಾವಕಾಶ, ಘಟಿಕೋತ್ಸವಕ್ಕೆ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ದಿನ, ಕಾಲೇಜುಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯ ಮಾಪನ ಅಂಕಗಳನ್ನು ವಿವಿಗೆ ಸಲ್ಲಿಸಲು ನೀಡಿದ್ದ ಸಮಯ ಮಿತಿ ಎಲ್ಲವನ್ನೂ ಪರಿಷ್ಕರಿಸಿ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿವೆ.

ದಂಡ ಶುಲ್ಕವಿಲ್ಲದೇ ಪರೀಕ್ಷಾ ಶುಲ್ಕ ಪಾವತಿಸಲು ಫೆ.15 ರಿಂದ ಫೆ.22 ರವರೆಗೆ ಹಾಗೂ 100 ರೂ.ಗಳ ದಂಡ ಶುಲ್ಕದೊಂದಿಗೆ ಶುಲ್ಕ ಪಾವತಿಗೆ ಫೆ.26 ರಂದು ಮತ್ತು 200 ರೂ.,ಗಳ ದಂಡ ಶುಲ್ಕದೊಂದಿಗೆ ಪಾವತಿಸಲು ಮಾ.3 ರಂದು ಕೊನೆಯ ದಿನಾಂಕವಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News