'ಕಾಂಗ್ರೆಸ್ ರೈತರು' ಎಂದ ಮಾಜಿ ಸಚಿವ ಸಿ.ಟಿ.ರವಿಗೆ ಟ್ವಿಟ್ಟರಿಗರ ಛೀಮಾರಿ

Update: 2020-11-29 13:46 GMT

ಬೆಂಗಳೂರು, ನ.29: 'ಕಾಂಗ್ರೆಸ್ ರೈತರು' ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಡಿರುವ ಟ್ವೀಟ್ ಇದೀಗ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೇಂದ್ರದ ರೈತ, ಕಾರ್ಮಿಕ ನೀತಿಗಳನ್ನು ವಿರೋಧಿಸಿ ದೇಶದ ರೈತರು ನಡೆಸುತ್ತಿರುವ ದಿಲ್ಲಿ ಚಲೋ ಬಗ್ಗೆಯೇ ಈ ಟ್ವೀಟ್ ಮಾಡಲಾಗಿದೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ''ನಿಮಗೆ ನಾಚಿಕೆಯಾಗಬೇಕು'' ಎಂದು ಮಾಜಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ದಿಲ್ಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ದಿಲ್ಲಿಯತ್ತ ಟ್ರಾಕ್ಟರ್‌ಗಳು ಹಾಗೂ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಆದರೆ ರೈತರನ್ನು ತಡೆಯಲು ಪೊಲೀಸರು ರೈತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿ ಚದುರಿಸಲು ಯತ್ನಿಸಿದ್ದಾರೆ. ಆದರೆ ದಿನೇ ದಿನೇ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಕೆಂದ್ರ ಸರಕಾರ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಈ ನಡುವೆ ನ.27 ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಅವರು 'ಕಾಂಗ್ರೆಸ್ ರೈತರು' ಎಂದು ಟ್ವೀಟ್ ಮಾಡಿದ್ದು, ಟ್ವಿಟರಿಗರ ಆಕ್ರೋಶಕ್ಕೆ ಗುರಿಯಾಗಿದೆ. ದಿಲ್ಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆಯೇ ಅವರು ಟ್ವೀಟ್ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ನ್ನು 231 ಬಾರಿ ರಿಟ್ವೀಟ್ ಮಾಡಲಾಗಿದೆ.

''ಸಿ.ಟಿ.ರವಿ ಅವರೇ, ರೈತರ ಸಮಸ್ಯೆಯಲ್ಲೂ ಪಕ್ಷ ತರುತ್ತೀರಲ್ಲ, ನಿಮಗದು ಸರಿಯೇ? ನಿತ್ಯ ನೀವು ತಿನ್ನುವ ಅನ್ನ ಕಾಂಗ್ರೆಸ್ ರೈತರು ಬೆಳೆದಿದ್ದೊ ಅಥವಾ ಬಿಜೆಪಿ ರೈತರು ಬೆಳೆದಿದ್ದೋ ನೀವೇ ಉತ್ತರಿಸಿ. ರೈತರಲ್ಲೂ ಪಕ್ಷ ಹುಡುಕುವ ನಿಮಗೆ ಮಂತ್ರಿಗಿರಿ ಬೇರೆ'' ಎಂದು ಮಧುಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

''ಪ್ರತಿಭಟನೆ ಮಾಡುತ್ತಿರುವ ರೈತರು ಕಾಂಗ್ರೆಸ್ ಏಜೆಂಟ್ ಗಳಂತೆ ! ಓ, ಹಾಗಾದ್ರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಅಣ್ಣಾ ಹಜಾರೆ ಅಯೋದ್ಯೆಯಿಂದ ಶ್ರೀರಾಮ ಕಳಿಸಿದ ದೈವ ಸಂದೇಶಕನೇ'' ಎಂದು ಶರತ್ ಎಂಬವರು ಪ್ರಶ್ನಿಸಿದ್ದಾರೆ.

''ಭವಿಷ್ಯದಲ್ಲಿ ನೀವು ಮಾಡಿದ ಈ ಟ್ವೀಟ್ ಬಗ್ಗೆ ನಿಮ್ಮಲ್ಲಿ ಪಶ್ಚಾತಾಪ ಮೂಡಬಹುದು ಅಂತ ಭಾವಿಸುತ್ತೀನೆ. ಸಿ.ಟಿ ರವಿ ಅವರೇ, ಅವರೇ, ಮುಂದೊಂದಿನ ಈ ಟ್ವೀಟ್ ಅನ್ನು ಸಮರ್ಥಿಸಲು ತುಂಬಾ ಕಷ್ಟ ಪಡುತ್ತೀರಿ'' ಎಂದು ಶರತ್ ಚಂದ್ರ ತೇರಿನಮಜಲು ಟ್ವೀಟ್ ಮಾಡಿದ್ದಾರೆ.

''ಮೇಲಿನ ಪೋಟೋದಲ್ಲಿರುವವರು ನಿಜವಾದ ರೈತರು. ಪಾಪ ದೇಶಕ್ಕೆ ಅನ್ನ ಹಾಕುವವರು. ಉಳಿದವರು ಕಾಂಗ್ರೆಸ್ ರೈತರು ನಿಮ್ಮ ವಿರುದ್ದ ಮಾತನಾಡುವವರೆಲ್ಲಾ ಕಾಂಗ್ರೆಸ್‌ನವರು, ಭಯೋತ್ಪಾದಕರು. ರವಿ ಅವರೇ ನಿಮಗೆ ನನ್ನ ಸವಾಲು. ನಿಜವಾಗಿಯೂ ಧೈರ್ಯವಿದ್ದರೆ ಹೋರಾಟ ನಡೆಯುವ ಸ್ಥಳಕ್ಕೆ ಹೋಗಿ ನೀವು ಈ ಮಾತು ಹೇಳಿ. ಆಗ ನೀವು ಸರಿಯೆಂದು ಒಪ್ಪುತ್ತೇನೆ'' ಎಂದು ನಳಿನಿ ಎಂಬವರು ಸವಾಲು ಹಾಕಿದ್ದಾರೆ.

''ಅಂಬಾನಿ, ಅದಾನಿಯ ಬೂಟು ನೆಕ್ಕುವ, ಧರ್ಮ ಜಾತಿ ಹೆಸರಿನಲ್ಲಿ ಗಲಭೆ ಸೃಷ್ಟಿಸುವ ಬಡವರನ್ನು, ರೈತರನ್ನು ಬೀದಿಗೆ ತರುವ ಕಾರ್ಪೋರೇಟರ್ ಗಳನ್ನು ಇನ್ನೂ ಶ್ರೀಮಂತಗೊಳಿಸುವ ನಮ್ಮಂತ ಅಯೋಗ್ಯರನ್ನು ಚುನಾಯಿಸಿದ ಮತದಾರರಿಗೆ ಧನ್ಯವಾದ ಹೇಳುವ'' ಎಂದು ಆಸಿಫ್ ಎಂಬವರು ಟ್ವೀಟ್ ಮಾಡಿದ್ದಾರೆ.

''ಕುಡಿದು ಮಾತಾನಾಡಬೇಡಿ. ಎಲ್ಲ ಕಾಲದಿಂದಲೂ ಸರ್ಕಾರಗಳ ವಿರುದ್ಧ ರೈತರು ಹೋರಾಡಿದ್ದಾರೆ. ನೀವು ಕೂಡ ಹೋರಾಡಿದ್ದಿರಿ, ಅದರೇ ಈಗ ನಿಮ್ಮ ತೆವಲಿಗಾಗಿ ರೈತರನ್ನು ಅಣಕಿಸುವದನ್ನು ಬಿಡಿ'' ಎಂದು ಬಾಬು ಎಂಬವರು ತಿಳಿಸಿದ್ದಾರೆ.

''ಎಲ್ಲರಿಗೂ ತಿನ್ನಲು ಬೇಕು ಅನ್ನ. ಆದರೆ ಕಾಯುವವರು ಯಾರು ನಮ್ಮನ್ನ. ನಾವು ರಕ್ತ ಬಸಿದು ಬೆಳೆದ ಅನ್ನ. ನಮ್ಮ ಮೇಲೆ ಯಾಕೆ ದೌರ್ಜನ್ಯ. ನಮಗೆ ಬೇಕಿಲ್ಲದ ಅ ಕಾನೂನು ನಿಮಗೇಕೆ. ನಮ್ಮ ಮೇಲೆ ನಿಮಗೆ ಈ ಹಠವೇಕೆ. ಕೇಳಿ ನಮ್ಮ ಮನದಾಳದ ಮಾತು. ನಿಮಗೆ ಬುದ್ದಿ ಕಲಿಸುವುದು ನಮಗೆ ಗೊತ್ತು. #FarmersProtest #IamWithFarmers'' ಎಂದು ದಿಲೀಪ್ ಗೌಡ ಎಂಬವರು ತಿಳಿಸಿದ್ದಾರೆ.

''ಕಾಂಗ್ರೆಸ್ ರೈತ ಬಿಜೆಪಿ ರೈತ ಅಂತ ಒಡೆದು ಆಳೋ ರಾಜಕಾರಣಿಗಳು ದೇಶಕ್ಕೆ ಅಪಾಯ'' ಎಂದು ಅನಿಲ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News