ಡಿಸಿಎಂ ಸವದಿ, ಆನಂದ್‍ ಸಿಂಗ್‍ಗೆ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಯತ್ನ: ಹೋರಾಟಗಾರರ ಬಂಧನ

Update: 2020-11-29 13:55 GMT

ಬಳ್ಳಾರಿ, ನ. 29: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಘೋಷಿಸಿರುವುದನ್ನು ವಿರೋಧಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ ಸಿಂಗ್‍ಗೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ಘೇರಾವ್ ಹಾಕಿ ಕಪ್ಪು ಪಟ್ಟಿ ಪ್ರದರ್ಶಿಸಿದ ಘಟನೆ ನಡೆದಿದೆ.

ರವಿವಾರ ನಗರದಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಕಾರ್ಯಕ್ರಮದ ನಿಮಿತ್ತ ನಗರಕ್ಕಾಗಮಿಸಿದ ಆನಂದ ಸಿಂಗ್ ಹಾಗೂ ಲಕ್ಷ್ಮಣ ಸವದಿ ಅಧಿದೇವತೆ ಕನಕದುರ್ಗಮ್ಮ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡರು ಉಭಯ ನಾಯಕರಿಗೆ ಘೇರಾವ್ ಹಾಕಿ ಅಕ್ರೋಶ ವ್ಯಕ್ತಪಡಿಸಲು ಸಿದ್ಧತೆ ನಡೆಸಿದ್ದರು. ಈ ವೇಳೆ ಸಮಿತಿ ಕಾರ್ಯಕರ್ತರು ಮತ್ತು ಮುಖಂಡರನ್ನು ಪೊಲೀಸರು ಬಂಧಿಸಿ, ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು.

ವೈಯಕ್ತಿಕ ಹಿತಾಸಕ್ತಿಗಾಗಿ ಆನಂದ ಸಿಂಗ್ ಅವರು ಜಿಲ್ಲೆಯನ್ನು ವಿಭಜಿಸಿದ್ದಾರೆ ಎಂದು ಆರೋಪಿದ ಹೋರಾಟಗಾರರು, ಕಪ್ಪು ಬಾವುಟ ಪ್ರದರ್ಶಿಸಿದರು. ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದವರನ್ನು ಪ್ರಶ್ನೆ ಮಾಡಲು ಸರಕಾರ ಬಿಡುತ್ತಿಲ್ಲ ಎಂದು ಕಿಡಿಕಾರಿದರು.

ಆ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ವಿಜಯನಗರ ಹೊಸ ಜಿಲ್ಲೆಯನ್ನು ರೂಪಿಸಿದ ಬಳಿಕ ಅನೇಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಕಾರ ಗಮನಿಸಿದೆ. ಈ ಸಂಬಂಧ ಮುಂದಿನ 4-5 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನಿಸಲಾಗುತ್ತದೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಮಾಡಿದ್ದೇವೆಯೇ ಹೊರತು ರಾಜಕೀಯ ಉದ್ದೇಶವಿಲ್ಲ ಹೇಳಿದರು.

ಹಳ್ಳಿಯಿಂದ ದಿಲ್ಲಿಯವರೆಗೆ ಪಕ್ಷ ಗಟ್ಟಿಗೊಳಿಸಿದ್ದೇವೆ. ರಾಜ್ಯದಲ್ಲಿ 6 ತಂಡಗಳನ್ನು ಮಾಡಿ ಎಲ್ಲಾ ಕಡೆ ಸಂಚಾರ ಮಾಡುತ್ತಿದ್ದೇವೆ. ಗ್ರಾ.ಪಂ.ಗಳಲ್ಲಿ ಶೇ. 80 ರಷ್ಟು ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಪಕ್ಷದೊಳಗೆ ಭಿನ್ನಮತ ಇಲ್ಲ, ಒಗ್ಗಟ್ಟಿನ ಕೊರತೆ ಕಂಡಿಲ್ಲ, ಗಾಳಿ ಸುದ್ದಿಗಳಿಗೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ. 2023 ರ ಚುನಾವಣೆಯವರೆಗೆ ಬಿಎಸ್‍ವೈ ಸಿಎಂ ಆಗಿರುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಗಾಳಿ ಸುದ್ದಿಗಳಿಗೆ ಕಿವಿಗೊಡೋದು ಬೇಡ ಎಂದು ಸವದಿ ಹೇಳಿದರು.

ಬಂದ್‍ಗೆ ಕರೆ: ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲನ್ನೇ ವಿಜಯನಗರದಿಂದ ಹೊರಕ್ಕೆ ಇಡುವ ಪ್ರಯತ್ನ ಸರಿಯಲ್ಲ. ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ರವಿವಾರ ನಡೆದ ಸಭೆಯಲ್ಲಿ ಅಖಂಡ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಆಗ್ರಹಿಸಿದರು. ಇದೇ ವೇಳೆ, ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಿಸದೇ ಇರುವುದನ್ನು ಖಂಡಿಸಿ ಸೋಮವಾರ ಬಂದ್ ಆಚರಿಸಲು ಕಂಪ್ಲಿ ತಾಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಿರ್ಧರಿಸಿದರು.

ಸಭೆಯಲ್ಲಿ ಸಮಿತಿಯ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಜಿ.ರಾಮಪ್ಪ, ದಾನಪ್ಪ, ಕೆ.ಶಂಕರಪ್ಪ, ಕೆ.ಮನೋಹರ್, ಪುರಸಭೆ ಸದಸ್ಯರಾದ ವಿ.ಎಲ್.ಬಾಬು, ಪ್ರಸಾದ್, ವೀರಾಂಜನೇಯುಲು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News