ನಿವಾರ್ ಚಂಡಮಾರುತ ಪರಿಣಾಮ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ

Update: 2020-11-29 14:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 29: ನಿವಾರ್ ಚಂಡಮಾರುತ ಪ್ರಭಾವದಿಂದಾಗಿ ತಾಪಮಾನದಲ್ಲಿ ಏರಿಳಿತವಾಗಿರುವ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಅಧಿಕಗೊಂಡಿದೆ. ಮೋಡ ಕವಿದ ವಾತಾವರಣ, ಉಷ್ಣಾಂಷದಲ್ಲಿ ಇಳಿಕೆ, ಅಧಿಕ ಗಾಳಿಯ ಪರಿಣಾಮ ವಾತಾವರಣ ತಂಪಾಗಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಜಯಪುರ, ಕಲಬುರಗಿ, ಬೀದರ್, ಹಾವೇರಿ, ಕೊಪ್ಪಳ ಹಾಗೂ ರಾಯಚೂರು ಸೇರಿ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 5-6 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇಳಿಕೆಯಾಗಿದೆ. ಆದುದರಿಂದಾಗಿ, ಈ ಭಾಗಗಳಲ್ಲಿ ಮುಂದಿನ ಎರಡು ಮೂರು ದಿನ ಚಳಿ ಹೆಚ್ಚಳವಾಗಲಿದೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಚಳಿಯಿದೆ. ಈ ಭಾಗಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಏರಿಳಿತವಾಗಿದೆ. ಶೀತ ಗಾಳಿ ಬೀಸುತ್ತಿದ್ದು, ಮುಂದಿನ ಮೂರು ದಿನಗಳವರೆಗೆ ಚಳಿಯಿರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈದ್ಯರ ಸಲಹೆಗಳು

- ಬೆಳಗ್ಗೆ 4 ಗಂಟೆಯಿಂದ 7ರವರೆಗೂ ಅಧಿಕ ಚಳಿಯಿರುತ್ತದೆ.

- ವಾಯುವಿಹಾರಕ್ಕೆ ಹೋಗುವವರು ಎಚ್ಚರಿಕೆ ವಹಿಸಲು ಸೂಚನೆ

- ಉಸಿರಾಟ ಸಮಸ್ಯೆಯುಳ್ಳವರು, ಎಲುಬು, ಕೀಲುನೋವುಗಳಿಂದ ಬಳಲುತ್ತಿರುವವರು ಮನೆಯಿಂದ ಹೊರಗೆ ಬರಬೇಡಿ

- ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಎದುರಾಗುತ್ತವೆ.

- ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರವನ್ನು ಬಳಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News