ಮಂಗಳೂರಿನ ವಿವಾದಾತ್ಮಕ ಗೋಡೆ ಬರಹದ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು ?

Update: 2020-11-29 14:25 GMT

ಚಿಕ್ಕಮಗಳೂರು, ನ.29: ಉಗ್ರರನ್ನು ಮಸಣಕ್ಕೆ ಕಳಿಸುವ ಕೆಲಸವನ್ನು ದೇಶದಲ್ಲಿ ಪೊಲೀಸ್ ಮತ್ತು ಸೇನೆ ಮಾಡುತ್ತಿದೆ. ಅವರಿಗೆ ಮಣೆ ಹಾಕಿ ಅವರ ಪರ ನಿಲ್ಲುವ ರಾಜಕೀಯ ವ್ಯವಸ್ಥೆಯೂ ಈಗಿಲ್ಲ. ಕಾಶ್ಮೀರದಲ್ಲಿ ಉಗ್ರರ ತಲೆ ಬಾಲ ಕತ್ತರಿಸಿದ್ದೇವೆ. ರಾಜ್ಯದಲ್ಲಿ ಉಗ್ರರು ಬಾಲ ಬಿಚ್ಚಿದರೆ ಬಾಲ ಕತ್ತರಿಸಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಸಿದರು.

ನಗರದಲ್ಲಿ ರವಿವಾರ, ಮಂಗಳೂರಿನಲ್ಲಿ ಗೋಡೆ ಮೇಲೆ ಬರೆದ ವಿವಾದಾತ್ಮಕ ಬರಹದ ಕುರಿತು ಪ್ರತಿಕ್ರಿಯಿಸಿದ ಅವರು, ಉಗ್ರರು ಹೋಗಬೇಕಿರುವುದು ಮಸಣಕ್ಕೆ. ಅವರನ್ನು ಮಸಣಕ್ಕೆ ಕಳಿಸುವ ಕೆಲಸ ಪೊಲೀಸ್ ಮತ್ತು ಸೇನೆ ಮಾಡುತ್ತಿದೆ ಎಂದರು.

ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿರುವವರ ಪರ ರಕ್ಷಣೆಯ ಮಾತನಾಡುತ್ತೀರಿ. ಸಂತ್ರಸ್ತ ಶಾಸಕ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣ ಪ್ರಾಥಮಿಕ ಹಂತದಲ್ಲಿದೆ. ಅದಕ್ಕೂ ಮುಂಚೆಯೇ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಪ್ರಕರಣಕ್ಕೆ ಈಗ ದೂರು ಬಂದಿದೆಯಲ್ಲ. ಯಾರನ್ನು ಮತ್ತು ಯಾಕೆ ರಕ್ಷಣೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ರಾಜಕೀಯ ವಿದ್ಯಾಮಾನಗಳ ಕುರಿತು ಸ್ವಯಂ ನಿರ್ಣಾಯ ಮಾಡಿಕೊಂಡಿದ್ದು, ಪಕ್ಷದ ಸೂಚನೆ ಇಲ್ಲದೆ ಮಾತನಾಡುವುದಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮರ್ಥರಿದ್ದು, ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಜೊತೆ ಸಮಲೋಚನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡುತ್ತಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಟರಿಗೆ ಸೇರಿದ್ದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News