ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆಸ್ಪತ್ರೆಯಿಂದ ಬಿಡುಗಡೆ

Update: 2020-11-29 15:31 GMT

ಬೆಂಗಳೂರು, ನ. 29: ಆತ್ಮಹತ್ಯೆ ಯತ್ನ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ರವಿವಾರ ಬಿಡುಗಡೆಯಾಗಿದ್ದು, ಈ ವೇಳೆ ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆ ಸಿಬ್ಬಂದಿಯ ತಂಡವೊಂದು ಹೇಳಿಕೆ ದಾಖಲಿಸಿಕೊಳ್ಳಲು ಮುಂದಾದ ವೇಳೆ ಹೇಳಿಕೆ ಕುರಿತು ನಿರಾಕರಿಸಿರುವ ಸಂತೋಷ್, ನನ್ನ ಆರೋಗ್ಯ ಚೆನ್ನಾಗಿಲ್ಲ. ಸ್ವಲ್ಪ ದಿನ ವಿಶ್ರಾಂತಿ ಬೇಕು. ಹೇಳಿಕೆ ನೀಡುವಂತೆ ಒತ್ತಾಯಿಸಬೇಡಿ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಇದೇ ನೆಪದಲ್ಲಿ ಪದೇ ಪದೇ ತೊಂದರೆ ನೀಡಬೇಡಿ. ಹೇಳಿಕೆ ನೀಡಬೇಕು ಎನಿಸಿದಾಗ ನಾನೇ ಠಾಣೆಗೆ ಬಂದು ಹೇಳಿಕೆ ನೀಡುತ್ತೇನೆ ಎಂದು ಹೇಳಿ ಪೊಲೀಸರನ್ನು ಮನೆಯಿಂದ ವಾಪಸು ಕಳುಹಿಸಿದರು ಎಂದು ತಿಳಿದುಬಂದಿದೆ.

ದಿನಗಳ ಹಿಂದೆ ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ಮನೆಯಲ್ಲಿ 12 ನಿದ್ರೆ ಮಾತ್ರೆಗಳನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡಿದ್ದ ಸಂತೋಷ್ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಅವರನ್ನು ಶನಿವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ಆತ್ಮಹತ್ಯೆ ಅಪರಾಧ ಹಿನ್ನೆಲೆ ವೈದ್ಯರು ಮಾಹಿತಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಪೊಲೀಸರು, ಸಂತೋಷ್ ಅವರ ಹೇಳಿಕೆ ಪ್ರಕ್ರಿಯೆಗೆ ಮುಂದಾಗಿದ್ದರು. ಆದರೆ, ಅವರು ನಿರಾಕರಿಸಿರುವ ಹಿನ್ನೆಲೆ ಠಾಣೆಯ ಸಿಬ್ಬಂದಿಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News