ಯುವತಿಯರಿಬ್ಬರ ಸ್ವಚ್ಛತಾ ಅಭಿಯಾನಕ್ಕೆ ಸ್ಪಂದಿಸಿದ ಸಂಘ ಸಂಸ್ಥೆಗಳು: 27 ಕಿಮೀ ಹೆದ್ದಾರಿ ಸ್ವಚ್ಛ

Update: 2020-11-29 15:17 GMT

ಚಿಕ್ಕಮಗಳೂರು, ನ.29: ಯುವತಿಯರಿಬ್ಬರ ಸಾಮಾಜಿಕ ಕಳಕಳಿಗೆ ಸ್ಪಂದಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೂಡಿಗೆರೆಯಿಂದ ಚಿಕ್ಕಮಗಳೂರಿನವರೆಗೆ 27 ಕಿಲೋ ಮೀಟರ್ ನಷ್ಟು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಛಗೊಳಿಸಿದ ಘಟನೆ ಇತ್ತೀಚೆಗೆ ನಡೆಯಿತು.

ಆಲ್ದೂರಿನ ನಿಧಿಲವ ಮತ್ತು ಹಾಂದಿಯ ಸನ್ಮತಿ ದಿವ್ಯ ಪ್ರಸಾದ್ ಅವರು ಕರ್ತವ್ಯ ಹೆಸರಿನಲ್ಲಿ ವಾಟ್ಸ್‍ಆಪ್ ಗ್ರೂಪ್ ರಚಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಛಗೊಳಿಸುವ ಕನಸಿನೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ್ದರು.

ಯುವತಿಯರ ಸಾಮಾಜಿಕ ಕಳಕಳಿಗೆ ಸ್ಪಂದಿಸಿ ಒಗ್ಗೂಡಿದ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಜೆಸಿಐ, ಸಚೇತನ ಯುವಕ ಸಂಘ, ಶಿವಗಿರಿ ತಂಡದ 250ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಚ್ಚತಾ ಅಭಿಯಾನಕ್ಕೆ ಕೈ ಜೋಡಿಸಿದರು. ಕರ್ತವ್ಯ ಎನ್.ಎಚ್.173 ಎಂಬ ಹೆಸರಿನಡಿ ಸ್ವಚ್ಚತಾ ಅಭಿಯಾನ ನಡೆಸಿದ್ದು, ಈ ವೇಳೆ 9 ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ ಮೂರು ಕಿ.ಮೀ ಸ್ವಚ್ಚಗೊಳಿಸಲು ನಿಗದಿ ಮಾಡಿದ್ದು, ಅದರಂತೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಿಂದ ಚಿಕ್ಕಮಗಳೂರಿನ ಕೆಫೆ ಕಾಫಿ ಡೇವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಛಗೊಳಿಸಲಾಯಿತು.

ಸಾಮಾಜಿಕ ಕಳಕಳಿಗೆ ಆಕರ್ಷಿತರಾದ ಪೊಲೀಸರು ಮತ್ತು ಸಾರ್ವಜನಿಕರೂ ಅಭಿಯಾನಕ್ಕೆ ಕೈ ಜೋಡಿಸಿ ಸ್ವಚ್ಚತಾ ಕಾರ್ಯ ಕೈಗೊಂಡರು. ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಕುಡಿಯುವ ನೀರು, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಹಣ್ಣುಗಳನ್ನು ವಿತರಿಸಲಾಗಿತ್ತು. ಒಟ್ಟು 16 ಟ್ಯ್ರಾಕ್ಟರ್, 5 ಪಿಕ್‍ಅಪ್ ಲೋಡ್ ಕಸ ಸಂಗ್ರಹವಾಗಿದ್ದು, ಅದನ್ನು ಇಂದಾವರ ಹಾಗೂ ಮೂಡಿಗೆರೆಯ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲಾಯಿತು.

ಈ ವೇಳೆ ಮಾತನಾಡಿದ ಅಭಿಯಾನದ ರೂವಾರಿ ನಿಧಿ ಹಾಗೂ ಸನ್ಮತಿ, ತಮ್ಮ ಕರೆಗೆ  ಓಗೊಟ್ಟು ಸ್ವಚ್ಚತಾ ಕಾರ್ಯವನ್ನು ಯಶಸ್ವಿಗೊಳಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಯಶಸ್ಸಿನಿಂದ ತಮಗೆ ಹೆಚ್ಚಿನ ಸ್ಪೂರ್ತಿ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಸೇವಾಕಾರ್ಯ  ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News