ನೆರೆ, ಕೊರೋನ ಸಂಕಷ್ಟದ ನಡುವೆಯೂ ನಿವೇಶನ ಹಂಚಿಕೆ ನಿಲ್ಲಿಸದ ರಾಜ್ಯ ಸರಕಾರ

Update: 2020-11-29 15:56 GMT

ಬೆಂಗಳೂರು, ನ. 29: ನೆರೆ ಸಮಸ್ಯೆ ಹಾಗೂ ಕೊರೋನ ಸಂಕಷ್ಟದ ಹಿನ್ನೆಲೆ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆಯಡಿ ಯಾವುದೇ ಹೊಸ ಮನೆ ನಿರ್ಮಾಣಕ್ಕೆ ಗುರಿ ನೀಡದಿದ್ದರೂ ನಿವೇಶನ ಹಂಚಿಕೆ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

ರಾಜ್ಯ ಸರಕಾರ 2020-21ನೆ ಸಾಲಿನಲ್ಲಿ ವಸತಿ ಯೋಜನೆಯಡಿ ಯಾವುದೇ ಹೊಸ ಮನೆಗಳ ಗುರಿ ನೀಡಿಲ್ಲ. ಸರಕಾರ ವಿವಿಧ ವಸತಿ ಯೋಜನೆಗಳಡಿ ಪ್ರತಿ ವರ್ಷ ಆಯವ್ಯಯದಲ್ಲಿ ನಿಗದಿಪಡಿಸುವ ಅನುದಾನಕ್ಕೆ ಅನುಗುಣವಾಗಿ ಗ್ರಾ.ಪಂ.ವಾರು, ಸ್ಥಳೀಯ ಸಂಸ್ಥೆಗಳವಾರು ಮನೆಗಳ ಗುರಿ ನಿಗದಿಪಡಿಸಿ ಗ್ರಾಮ ಸಭೆ, ಆಶ್ರಯ ಸಮಿತಿಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಿತ್ತಿತ್ತು. ಆದರೆ, ನೆರೆ ಸಮಸ್ಯೆ ಹಾಗೂ ಕೊರೋನ ಸಂಕಷ್ಟದ ಹಿನ್ನೆಲೆ ಯಾವುದೇ ಹೊಸ ಮನೆ ನಿರ್ಮಾಣಕ್ಕೆ ಸರಕಾರ ಮುಂದಾಗುತ್ತಿಲ್ಲ.

ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳಾದ ಬಸವ ವಸತಿ, ಯೋಜನೆ ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ ಮತ್ತು ನಗರ), ವಾಜಪೇಯಿ ನಗರ ವಸತಿ ಯೋಜನೆ, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ (ಗ್ರಾಮೀಣ ಮತ್ತು ನಗರ) ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) ಯೋಜನೆಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) ಬರುತ್ತದೆ. ಪ್ರಸಕ್ತ ಆರ್ಥಿಕ ವರ್ಷ ಆರಂಭದ ದಿನಗಳಲ್ಲಿ ಕೊರೋನ ಲಾಕ್‍ಡೌನ್ ಹಾಗೂ ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಯಾವುದೇ ಹೊಸ ಮನೆಗಳ ಗುರಿ ಕೈಗೆತ್ತಿಕೊಳ್ಳಲು ಸರಕಾರ ತೀರ್ಮಾನಿಸಿದೆ.

ವಸತಿ ಯೋಜನೆ ಸಹಾಯಧನ: ಬಸವ ವಸತಿ ಯೋಜನೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಘಟಕ ವೆಚ್ಚವಿರುವುದಿಲ್ಲ. ಸಾಮಾನ್ಯ ವರ್ಗಕ್ಕೆ 1.2 ಲಕ್ಷ ರೂ. ನಿಗದಿಪಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ 1.75 ಲಕ್ಷ ರೂ. ನಗರ ಭಾಗದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಘಟಕ ವೆಚ್ಚ 2 ಲಕ್ಷ ರೂ. ಇರಲಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ 1.5 ಲಕ್ಷ ರೂ., ಸಾಮಾನ್ಯ ವರ್ಗಕ್ಕೆ 12 ಲಕ್ಷ ರೂ. ಘಟಕ ವೆಚ್ಚ ಇದೆ. ದೇವರಾಜ್ ಅರಸು ವಸತಿ ಯೋಜನೆ ಗ್ರಾಮೀಣ ಹಾಗೂ ನಗರ ಭಾಗದ ಯೋಜನೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಘಟಕ ವೆಚ್ಚ 1.5 ಲಕ್ಷ ರೂ. ಸಾಮಾನ್ಯ ವರ್ಗಕ್ಕೆ 1.2 ಲಕ್ಷ ರೂ. ಇದೆ. ವಾಜಪೇಯಿ ನಗರ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಘಟಕ ವೆಚ್ಚ ಇಲ್ಲವಾದರೆ ಸಾಮಾನ್ಯ ವರ್ಗಕ್ಕೆ 1.2 ಲಕ್ಷ ರೂ. ಇದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ವಿಭಾಗದಲ್ಲಿ 1.5 ಲಕ್ಷ ರೂ. ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಘಟಕ ವೆಚ್ಚವಿದೆ.

1,696 ನಿವೇಶನ ಹಂಚಿಕೆ: ರಾಜ್ಯ ಸರಕಾರ 2020ರ ಎಪ್ರಿಲ್‍ನಿಂದ ಆಗಸ್ಟ್ ತಿಂಗಳ ನಡುವೆ ಒಟ್ಟು 1,696 ನಿವೇಶನಗಳನ್ನು ಹಂಚಿಕೆ ಮಾಡಿದೆ. ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 1,309 ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಯಡಿ 387 ನಿವೇಶನ ಹಂಚಿಕೆ ಮಾಡಲಾಗಿದೆ.

ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯನ್ನು ರಾಜ್ಯ ಸರಕಾರದ ಯೋಜನೆಗಳಾದ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯೊಂದಿಗೆ ಸಂಯೋಜನೆಗೊಳಿಸಿ ಅನುಷ್ಟಾನಗೊಳಿಸಲಾಗುತ್ತಿದೆ. ಇದರಿಂದ ಬಡ ಹಾಗೂ ನಿರ್ಗತಿಕ ಫಲಾನುಭವಿಗಳ ನಿವೇಶನ ಹಾಗೂ ಮನೆ ನಿರ್ಮಿಸಿಕೊಳ್ಳುವ ಕನಸು ಈಡೇರಲಿದೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಒಂದು ಸೂರು ಎಂಬ ಕನಸು ನನಸಾಗಿಸಲು ಹಲವು ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದ್ದು, ಮುಂದಿನ ನಾಲ್ಕೈದು ವರ್ಷಗಳಲ್ಲಿ ವಸತಿ ರಹಿತರು ಇರದಂತೆ ಮಾಡುವ ಗುರಿ ಹೊಂದಲಾಗಿದೆ

- ವಿ.ಸೋಮಣ್ಣ, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News