ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸುವ ಶಾಸಕರ ವಿರುದ್ಧ ರೌಡಿಶೀಟರ್ ದಾಖಲಿಸಿ: ನಳಿನ್ ಕುಮಾರ್

Update: 2020-11-29 16:12 GMT

ಬಾಗೇಪಲ್ಲಿ, ನ.29: ಸರ್ಕಾರಿ ಯೋಜನೆಗಳಲ್ಲಿ ಕಮಿಷನ್ ಹೊಡೆಯುವ ಕ್ಷೇತ್ರದ ಶಾಸಕರ ವಿರುದ್ಧ ಮಾತನಾಡುವ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಹಾಕುವುದು ಬಿಟ್ಟು ನಿಮಗೆ ತಾಕತ್ತು ಇದ್ದರೆ ಅಮಾಯಕ ಜನರ ಮೇಲೆ ಗೂಂಡಾಗಿರಿ ನಡೆಸುತ್ತಿರುವ ಕ್ಷೇತ್ರ ಶಾಸಕರ ಮೇಲೆ ರೌಡಿಶೀಟರ್ ದಾಖಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪೋಲಿಸ್ ಇಲಾಖೆಗೆ ಬಹಿರಂಗ ಸವಾಲು ಹಾಕಿದರು.

ಪಟ್ಟಣದ ಹೊರವಲಯದ ಎಸ್.ಎಲ್.ಎನ್ ಕಲ್ಯಾಣ ಮಂಟಪದಲ್ಲಿ ಅಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ ಜನತೆ ಅನುಭವಿಸುತ್ತಿರುವ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಆಳ್ವಿಕೆ, ದೌರ್ಜನ್ಯಗಳಿಂದ ಮುಕ್ತಿ ಸಿಗಬೇಕಾದರೆ ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯತ್ ಹಾಗೂ ಮತಗಟ್ಟೆಯನ್ನು ಸ್ಥಾಪಿಸಿಬೇಕು. ಮಧ್ಯದ ಹಣವನ್ನು ಚೆಲ್ಲಿ ಶಾಸಕರಾಗಿ ಸರ್ಕಾರಿ ಯೋಜನೆಗಳಲ್ಲಿ ಕಮೀಷನ್ ಹೊಡೆದು ಕ್ಷೇತ್ರದ ಅಭಿವೃದ್ದಿ ಕುಂಠಿತಗೊಳಿಸಿದ್ದಾರೆ ಎಂಬ ಮಾಹಿತಿ ಬಿಜೆಪಿ ಬಳಿ ಇದೆ ಎಂದರು.

ಕ್ಷೇತ್ರದ ಜನರ ಮೇಲೆ ಗೂಂಡಾಗಿರಿಯನ್ನು ತೋರಿಸುತ್ತಿರುವ ಶಾಸಕರನ್ನು ಮುಂದಿನ ದಿನಗಳಲ್ಲಿ ಪರಿವರ್ತನೆ ಮಾಡುವ ಸಂಕಲ್ಪವನ್ನು ಬಿಜೆಪಿ ಮಾಡಬೇಕಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತನೂ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕಾಂಗ್ರೆಸ್ ಮುಕ್ತ ಮತಗಟ್ಟೆ ಮಾಡುವ ಪಣತೊಟ್ಟಬೇಕು. ಕಾಂಗ್ರೆಸ್ ಶಾಸಕರೊಂದಿಗೆ ಇಲ್ಲಿನ ಪೊಲೀಸರು ಶಾಮೀಲಾಗಿ ಕಾರ್ಯಕರ್ತ ಮೇಲೆ ಗೂಂಡಾಗಿರಿ ತೋರಿಸಲು ಮುಂದಾದರೆ ಕಾರ್ಯಕರ್ತರ ಜೊತೆಗೆ ನಾವಿದ್ದೇವೆ ಎನ್ನುವುದನ್ನು ಮರೆಯಬೇಡಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಕ್ಷೇತ್ರದ ಅಭಿವೃದ್ದಿಯ ಸಂಕಲ್ಪಕ್ಕೆ ಬಿಜೆಪಿ ಪಣತೊಟ್ಟಿದೆ. ಅಭಿವೃದ್ದಿ ವಿಚಾರದಲ್ಲಿ ಕಾರ್ಯಕರ್ತರೊಂದಿಗೆ ನಾವು ಇದ್ದೇವೆ. ಯಾವುದೇ ರೀತಿಯ ಸಮಸ್ಯೆ ಇರಲಿ ಪಕ್ಷದ ಗಮನಕ್ಕೆ ತನ್ನಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ನಿಮಗೆ ರಕ್ಷಣೆಗೆ ನಾವಿದ್ದೇವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಸಂಸದೆ ಶೋಭ ಕರಾಂದ್ಲಾಜೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ನಾವೇ ಕೊಡುತ್ತಿದ್ದೇವೆಂದು ಕಾಂಗ್ರೆಸ್ ಶಾಸಕರು ಸುಳ್ಳು ಪ್ರಚಾರಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಸುಳ್ಳು ಪ್ರಚಾರಗಳಿಗೆ ತೆರೆ ಎಳೆಯಲು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ಮುಟ್ಟಿಸುವ ಪರಿಣಾಮಕಾರಿ ಯೋಜನೆಯನ್ನು ರೂಪಿಸಕೊಳ್ಳಬೇಕು. ಮುಂದಿನ ವಿಧಾನಸಭಾ ಅವಧಿಗೂ ಜನತೆಗೆ ಸುಭದ್ರ ಸರ್ಕಾರ ನೀಡುವ ಗುರಿಯನ್ನು ಹೊಂದಿರುವ ಬಿಜೆಪಿಗೆ ಮತ್ತಷ್ಟು ಬಲ ಸಿಗಬೇಕಾದರೆ ಬಯಲು ಸೀಮೆ ಪ್ರದೇಶಗಳಲ್ಲಿ ಬಹತೇಕ ಗ್ರಾಮ ಪಂಚಾಯತ್ ಗಳನ್ನು ಗೆಲ್ಲಬೇಕು. ಬಿಜೆಪಿ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ, ಸಂಘಟನಾ ವಿಭಾಗ ಕಾರ್ಯದರ್ಶಿ ಕಾಂತರಾಜು, ಮಂಡಲಾಧ್ಯಕ್ಷ ಆರ್.ಪ್ರತಾಪ್, ಗೆಂಗರೆಡ್ಡಿ, ಪದಾಧಿಕಾರಿಗಳಾದ ಎಸ್‍.ಟಿ.ಚಂದ್ರಮೋಹನ್ ,ಆರ್.ವೆಂಕಟೇಶ್, ಗೋಪಾಲ, ಮಲ್ಲಿಕಾರ್ಜುನರೆಡ್ಡಿ, ಸಿ.ಎನ್.ಧೀರಜ್, ಮಲ್ಲಿಕಾರ್ಜುನ, ಮಂಜುನಾಥ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News