ಎಸ್ಟಿ ಮೀಸಲಾತಿಗಾಗಿ 340 ಕಿ.ಮೀ. ಪಾದಯಾತ್ರೆ: ನಿರಂಜನಾನಂದಪುರಿ ಸ್ವಾಮೀಜಿ

Update: 2020-11-29 16:23 GMT

ಬಾಗಲಕೋಟೆ, ನ. 29: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ)ದ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಜನವರಿಯಿಂದ ಸುಮಾರು 340 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ರವಿವಾರ ನಗರದ ಕಾಳಿದಾಸ ಮೈದಾನದಲ್ಲಿ ಕುರುಬರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಸಮಾವೇಶದಲ್ಲಿ ಸುಮ್ಮನೆ ಬಂದು ಕೂತಿಲ್ಲ. ನಮ್ಮ ಮುಂದೆ ಸ್ಪಷ್ಟವಾದ ಗುರಿ, ಉದ್ದೇಶಗಳಿವೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಪಡೆಯುವುದಕ್ಕಾಗಿ ನಿರಂತರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕುರುಬರ ಋಣದಲ್ಲಿ ಬಿಜೆಪಿ ಸರಕಾರ: ಕನಕ ಗುರುಪೀಠದ ತಿಂಥಿಣಿ ಶಾಖೆಯ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯದ ಋಣದಿಂದ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಕುರುಬ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಮುದಾಯದ ಋಣ ತೀರಿಸಲಿ ಎಂದು ಆಗ್ರಹಿಸಿದರು.

ಕುರುಬ ಸಮುದಾಯವನ್ನು ಎಸ್ಟಿ(ಪರಿಶಿಷ್ಟ ಪಂಗಡಕ್ಕೆ)ಗೆ ಸೇರಿಸಬೇಕೆಂಬುದು ನಮ್ಮ ಮನವಿಯಲ್ಲ, ಆಗ್ರಹವಾಗಿದೆ. ಇದನ್ನು ಆಗು ಮಾಡುವ ನಿಟ್ಟಿನಲ್ಲಿ ಕುರುಬ ಸಮುದಾಯ ನಿರಂತರವಾದ ಹೋರಾಟದಲ್ಲಿ ತೊಡಗಿದೆ. ಆದರೆ, ರಾಜ್ಯ ಸರಕಾರ ಕೇವಲ ಒಂದು ಜಾತಿಗೆ ಸೀಮಿತವಾದಂತೆ ವರ್ತಿಸುತ್ತಿದೆ. ರಾಜ್ಯ ಸರಕಾರ ಈ ನೀತಿಯನ್ನು ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಗಮನಿಸಬೇಕು. ಹಾಗೂ ಕುರುಬ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಾವು ಕೇವಲ ಕುರುಬ ಸಮುದಾಯವನ್ನು ಮಾತ್ರ ಎಸ್ಟಿಗೆ ಸೇರಿಸಿಯೆಂದು ಕೇಳುತ್ತಿಲ್ಲ. ಯಾವೆಲ್ಲ ಬಡ ಸಮುದಾಯವಿದೆಯೋ, ಅವೆಲ್ಲವನ್ನು ಎಸ್ಟಿಗೆ ಪಟ್ಟಿಗೆ ಸೇರಿಸಲು ಚಿಂತನೆ ನಡೆದಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕುರುಬ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರಿಂದಲೂ ಸೂಕ್ತ ಭರವಸೆ ಸಿಕ್ಕಿದೆ.

-ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಪೀಠ

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಬರುತ್ತೇನೆಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರನ್ನು ಎಳೆದುಕೊಂಡು ಬರುವುದಕ್ಕಾಗುತ್ತದೆಯೇ.

-ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ದಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News