ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಶಾಸಕಿ ಅಂಜಲಿ ನಿಂಬಾಳ್ಕರ್

Update: 2020-11-29 16:38 GMT

ಧಾರವಾಡ, ನ. 29: ಮರಾಠ ಸಮುದಾಯಕ್ಕೆ ಹಿಂದುಳಿದ ವರ್ಗಗಳ 3ಬಿ ಯಿಂದ 2"ಎ" ಮೀಸಲಾತಿ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ನಡೆದ ಮರಾಠ ಕ್ರಾಂತಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಸಮಾಜದ ಬಗ್ಗೆ ರಾಜ್ಯ ಸರಕಾರಕ್ಕೆ ಕಾಳಜಿ ಇದ್ದರೆ 2ಎ ಮೀಸಲಾತಿ ನೀಡಬೇಕು. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೆ ಬೆಳಗಾವಿ, ಮಸ್ಕಿ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು.

ಮರಾಠ ಅಭಿವೃದ್ಧಿ ನಿಗಮ ರಚನೆಯ ವಿಷಯದಲ್ಲಿ ನಾವು ಸಿಎಂ ಯಡಿಯೂರಪ್ಪನವರ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳಲ್ಲ. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ರೂ.ಕೊಟ್ಟರೂ ಬೇಕಾಗಿಲ್ಲ. ಲಿಂಗಾಯತ ಸಮಾಜಕ್ಕೆ 500 ಕೋಟಿ ರೂ.ಕೊಟ್ಟಿದೀರಿ. ಹಾಗೆಯೇ ಚುನಾವಣಾ ಗಿಮಿಕ್ ಅಂತಾ ಯಾವ ಸಮಾಜಕ್ಕೆ ಏನೇನು ಕೊಡುತ್ತಿರೋ ಕೊಡಿ. ಯಾವ ಜಾತಿಗೆ ಎಷ್ಟು ಮತ ಇದೆ ಅಷ್ಟು ನಿಗಮ ಮಾಡುತ್ತಾ ಹೋಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಮಾತನಾಡಿ, ಸರಕಾರ ಮರಾಠ ಅಭಿವೃದ್ಧಿ ನಿಗಮ ರಚಿಸಿ, 50 ಕೋಟಿ ರೂ. ಮೀಸಲಿಟ್ಟಿರುವ ಬಗ್ಗೆ ಸಂಶಯವಿದೆ. ಮರಾಠ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಚುನಾವಣೆ ನಂತರ ಕಸದ ಬುಟ್ಟಿಗೆ ಹೋಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News