ಮನೆ ಬಾಗಿಲಿಗೆ ಬರಲಿದೆ ವೃದ್ಧಾಪ್ಯ ವೇತನ: ಕಂದಾಯ ಸಚಿವ ಆರ್.ಅಶೋಕ್ ಭರವಸೆ

Update: 2020-11-29 17:05 GMT

ಮಡಿಕೇರಿ ನ.29 : ಜನರ ಬಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ತರ ಯೋಜನೆ ರೂಪಿಸಿದ್ದು, ಆ ದಿಸೆಯಲ್ಲಿ ಅರ್ಜಿ ಸಲ್ಲಿಸದೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವೂ ಇನ್ನೂ 15-20 ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದ್ದಾರೆ.   

ಕಂದಾಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ ವತಿಯಿಂದ ಜಿಲ್ಲೆಯ ಪೊನ್ನಂಪೇಟೆಯಲ್ಲಿ ನೂತನ ತಾಲೂಕು ಕಚೇರಿ ಉದ್ಘಾಟಿಸಿ ಸಚಿವರು ಮಾತನಾಡಿದರು.  

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿದ್ದು, ಆ ದಿಸೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಾಲೂಕು ಕಚೇರಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಅಂತಹ 60 ವರ್ಷ ಪೂರ್ಣಗೊಂಡವರ ಮನೆ ಬಾಗಿಲಿಗೆ ಬ್ಯಾಂಕ್ ಖಾತೆಯ ಮಾಹಿತಿ ಒದಗಿಸುವಂತೆ ತಾಲೂಕು ಅಥವಾ ಜಿಲ್ಲಾಡಳಿತದಿಂದ ಪತ್ರ ಹೋಗಲಿದೆ, ನಂತರ ಅರ್ಜಿ ಸಲ್ಲಿಸದೆ ವೃದ್ದಾಪ್ಯ ವೇತನ ಪಡೆಯಬಹುದಾಗಿದೆ ಎಂದು ಕಂದಾಯ ಸಚಿವರು ವಿವರಿಸಿದರು.    

ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಕ್ರಮವಹಿಸಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ ಏಳುವರೆ ಸಾವಿರ ಕೋಟಿ ವಿನಿಯೋಗ ಮಾಡಲಾಗುತ್ತಿದೆ ಎಂದರು. 

ಜಿಲ್ಲಾಧಿಕಾರಿ ಅವರ ಪಿ.ಡಿ.ಖಾತೆಯಲ್ಲಿ 67 ಕೋಟಿ ರೂ ಹಣವಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ಬೆಳೆಹಾನಿಯ ಪ್ರಥಮ ಹಾಗೂ ದ್ವಿತೀಯ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 9 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳೆಹಾನಿ ಪರಿಹಾರ ಪಾವತಿಸಲಾಗಿದೆ, ಪ್ರವಾಹ ಸಂದರ್ಭದಲ್ಲಿ ಗೃಹೋಪಯೊಗಿ ವಸತು ಕಳೆದುಕೊಂಡವರ ಪರಿಹಾರಕ್ಕಾಗಿ 50 ಲಕ್ಷ ರೂ ಬಿಡುಗಡೆ ಮಾಡಲಾಗಿದೆ, ಕೋವಿಡ್ ನಿರ್ವಹಣೆಗೆ 15 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. 

ಮಡಿಕೇರಿ ಮತ್ತು ವಿರಾಜಪೇಟೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣ ಬಿಡುಗಡೆ, ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ, ಹೀಗೆ ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯು ಸಹ ಹಲವು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿದೆ ಎಂದು ಆರ್.ಅಶೋಕ್ ಅವರು ಹೇಳಿದರು.  

ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪೊನ್ನಂಪೇಟೆ ನೂತನ ತಾಲೂಕಿನ ಮೂಲ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಈಗಾಗಲೇ ತಾಲೂಕು ಆಡಳಿತಕ್ಕೆ 12 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದ್ದು, 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಪೊನ್ನಂಪೇಟೆ ತಾಲೂಕಿನಲ್ಲಿ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹೋಬಳಿ ಸೇರಿದೆ, ತಾಲೂಕಿನ ಭೌಗೋಳಿಕ ವಿಸ್ತೀರ್ಣ 1025 ಚದರ ಕೀ.ಮೀ ಆಗಿದ್ದು 1,01,157 ಜನಸಂಖ್ಯೆ ಹೊಂದಿದೆ. 49 ಗ್ರಾಮಗಳು ಸೇರಿದಂತೆ 21 ಗ್ರಾಮ ಪಂಚಾಯತ್ ಒಳಗೊಂಡಿದೆ, ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ, ರಾಮೇಶ್ವರ, ವೃಂತ್ಯುಂಜಯ ಹಾಗೂ ಕುಂದ ಬೆಟ್ಟ ಈಶ್ವರಿ ದೇವಸ್ಥಾನ, ಹಾಗೂ ಇರ್ಪು ಜಲಪಾತ ಸಚಿವರು ತಿಳಿಸಿದರು.  

ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಗಳು ಸುಗಮವಾಗಿ ತಲುಪಬೇಕು ಎಂಬ ಉದ್ದೇಶದಿಂದ ಹೊಸ ತಾಲೂಕು ರಚನೆ ಮಾಡಲಾಗಿದೆ. ಈ ಭಾಗದ ಜನರ ಭಾವನೆಗೆ ಸರ್ಕಾರ ಸ್ಪಂದಿಸಿದೆ ಎಂದು ಸಚಿವರು ನುಡಿದರು. 

ಈಗಾಗಲೇ ಪೌತಿ ಖಾತೆ ಆಂದೋಲನ ನಡೆಯುತ್ತಿದ್ದು, ಅರ್ಹರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಬೇಕು ಎಂದು ಸಚಿವರು ಹೇಳಿದರು.  

ಕುಶಾಲನಗರ ತಾಲೂಕು ಶೀಘ್ರ ಅಸ್ತಿತ್ವಕ್ಕೆ
ಪೊನ್ನಂಪೇಟೆಯಂತೆ ಕುಶಾಲನಗರ ತಾಲೂಕು ಕೇಂದ್ರಕ್ಕೆ ಶೀಘ್ರ ಚಾಲನೆ ನೀಡಲಾಗುವುದು, ಕೆಲವು ತಾಂತ್ರಿಕ ತೊಂದರೆಯಿಂದಾಗಿ ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬರಲು ವಿಳಂಬವಾಗಿದೆ ಎಂದರು.

ಸ್ಥಳೀಯ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಬಹಳ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದರು.  

ನೂತನ ತಾಲೂಕು ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಪೌತಿ ಖಾತೆ ಆಂದೋಲವನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ಮಾಡಿದರು. 

ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ನಿರಂತರ ಹೋರಾಟದ ಫಲವಾಗಿ ಪೊನ್ನಂಪೇಟೆ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿದೆ. ಅದೇ ರೀತಿ ಕುಶಾಲನಗರ ತಾಲೂಕು ಕೇಂದ್ರ ಅಸ್ತಿತ್ವಕ್ಕೆ ಬರಲಿದೆ. ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ  ಹೆಚ್ಚಿನ ಒತ್ತು ನೀಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ವಿರಾಜಪೇಟೆ ತಾ.ಪಂ.ಅಧ್ಯಕ್ಷರಾದ ಸ್ಮಿತಾ ಪ್ರಕಾಶ್, ಪೊನ್ನಂಪೇಟೆ ಗ್ರಾ.ಪಂ.ಅಧ್ಯಕ್ಷರಾದ ಎಂ.ಸುಮಿತ ಗಣೇಶ್, ವಿರಾಜಪೇಟೆ ತಹಶೀಲ್ದಾರ್ ಎಂ.ಎಲ್.ನಂದೀಶ್, ಪೊನ್ನಂಪೇಟೆ ತಹಶೀಲ್ದಾರ್ ಎ.ಎ.ಕುಸುಮ ಇತರರು ಇದ್ದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ವಾಗಸಿದರು, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News