ಯಡಿಯೂರಪ್ಪರಂತಹ ಸರ್ವಾಧಿಕಾರಿ ಮತ್ತೊಬ್ಬರಿಲ್ಲ: ವಾಟಾಳ್ ನಾಗಾರಾಜ್

Update: 2020-11-29 17:21 GMT

ಮೈಸೂರು, ನ.29: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಂತಹ ಸರ್ವಾಧಿಕಾರಿ ಮತ್ತೊಬ್ಬರಿಲ್ಲ ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ಮೈಸೂರು-ಬೆಂಗಳೂರು ರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆ ಸಿಗ್ನಲ್ ನಲ್ಲಿ ರವಿವಾರ ಮರಾಠಿ ಪ್ರಾಧಿಕಾರವನ್ನು ವಿರೋಧಿಸಿ ಹಾಗೂ ಪ್ರಾಧಿಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸರು ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ತಾಯೂರು ವಿಠಲಮೂರ್ತಿ, ರಘು ಸೇರಿದಂತೆ ಹಲವರನ್ನು ಬಂಧಿಸಿದರು.

ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ವಾಧಿಕಾರಿ. ಇಂತಹ ಮುಖ್ಯಮಂತ್ರಿ ಇದುವರೆಗೂ ಯಾರೂ ಬಂದಿರಲಿಲ್ಲ. ಚುನಾವಣೆಗೋಸ್ಕರ ಜಾತಿಗೊಂದು ಪ್ರಾಧಿಕಾರ ಮಾಡುತ್ತಿದ್ದಾರೆ. ಮರಾಠಿ ಪ್ರಾಧಿಕಾರ ಮಾಡಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಇನ್ನು ಸ್ವಲ್ಪದಿನ ಕಳೆದರೆ ಸುವರ್ಣಸೌಧ, ಬೆಳಗಾವಿ, ಖಾನಾಪುರ ಮತ್ತು ಖಾರವನ್ನು ಅವರಿಗೆ ಮಾರಿಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ, ಬೆಳಗಾವಿ ಸಂಸದರುಗಳು ಕೋಮಾದಲ್ಲಿದ್ದಾರೆ. ಅಲ್ಲಿನ ಎಂಎಲ್‍ಎ ಗಳಿಗೆ ಬಾಯಿ ಇಲ್ಲ, ಮಂತ್ರಿಗಳಿಗೆ ಶಬ್ದವೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.

ಡಿ.5 ರಂದು ಬಂದ್ ಮಾಡಿಯೇ ಮಾಡುತ್ತೇವೆ: ಡಿ.5 ರಂದು ನಡೆಯುವ ಕರ್ನಾಟಕ ಬಂದ್ ಕನ್ನಡಿಗರ ಶಕ್ತಿ ಪ್ರದರ್ಶನ, ಎಲ್ಲಾ ಕನ್ನಡಾಭಿಮಾನಿಗಳು ಒಗ್ಗಟ್ಟಾಗಿ ಕರ್ನಾಟ ಬಂದ್ ಮಾಡಿಯೇ ಮಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.

ಅಖಂಡ ಕರ್ನಾಟಕವನ್ನು ಬಂದ್ ಮಾಡುತ್ತೇವೆ. ಎಲ್ಲಾ ಗಡಿಗಳನ್ನು ಬಂದ್ ಮಾಡುತ್ತೇವೆ. ಕನ್ನಡಾಭಿಮಾನಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ, ಹೈವೆಗಳನ್ನು ತಡೆಯಿರಿ. ರಸ್ತೆಯಲ್ಲಿ ಕುಳಿತು ಬಸ್ಸು, ಕಾರು ಸೇರಿದಂತೆ ವಾಹನಗಳನ್ನು ಒಳಬಿಡಬೇಡಿ. ಯಾವ ವಾಹನಗಳು ಓಡಾಡದಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News