ಸಂಪುಟ ವಿಸ್ತರಣೆಗೂ ಗ್ರಾ.ಪಂ. ಚುನಾವಣೆಗೂ ಸಂಬಂಧವಿಲ್ಲ: ಯಡಿಯೂರಪ್ಪ

Update: 2020-11-30 11:25 GMT

ಬೆಂಗಳೂರು, ನ. 30: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಗೂ, ಸಚಿವ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇನ್ನೂ ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವುದು ನಿಶ್ಚಿತ ಎಂದು ಪುನರುಚ್ಚರಿಸಿದರು.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾ ದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದ್ದು, ನೀತಿ ಸಂಹಿತೆಯೂ ಜಾರಿಯಲ್ಲಿದೆ. ಇಂದಿನಿಂದ ನಾವು ಬೇರೆ ಯಾವುದೇ ಚಟುವಟಿಕೆಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯತ್ತ ನಾವು ಗಮನ ನೀಡುತ್ತೇನೆ. ಪಕ್ಷ ಬೆಂಬಲಿಸುವ ಯೋಗ್ಯ ಅಭ್ಯರ್ಥಿಗಳನ್ನು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲಿಸುತ್ತೇವೆ. ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶಗಳನ್ನು ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಲೋಕಸಭೆ, ವಿಧಾನಸಭೆ ಚುನಾವಣೆಯಷ್ಟೇ ಗ್ರಾಮ ಪಂಚಾಯತ್ ಚುನಾವಣೆಯೂ ನಮಗೆ ಬಹಳ ಮಹತ್ವದ್ದು. ಹೀಗಾಗಿ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಿದೆ ಎಂದ ಅವರು, ಈಗಾಗಲೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ತಂಡಗಳು ಪ್ರವಾಸ ಮಾಡುತ್ತಿವೆ. ನಮ್ಮ ಸಂಘಟನೆ ಭದ್ರ ಮಾಡಿಕೊಳ್ಳಲು ಇದು ಉತ್ತಮ ಅವಕಾಶ. ಪಕ್ಷದ ಚಿಹ್ನೆ ಇಲ್ಲದೇ ಇದ್ದರೂ ಯಾರು ಯಾವ ಅಭ್ಯರ್ಥಿ ಎಂದು ಗೊತ್ತಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News