'ಆತ್ಮಹತ್ಯೆ ಯತ್ನ' ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್

Update: 2020-11-30 11:35 GMT

ಬೆಂಗಳೂರು, ನ.30: ಅಜೀರ್ಣ ಉಂಟಾಗಿದ್ದ ಹಿನ್ನೆಲೆ ಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂದು ಗೊತ್ತಿರಲಿಲ್ಲ. ಹೀಗೆ, ಅಚಾತುರ್ಯ ನಡೆದಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊಟದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಅಜೀರ್ಣ ಉಂಟಾಗಿತ್ತು. ಆಗ ನಾನು ಯಾವುದನ್ನು ತೆಗೆದುಕೊಳ್ಳಬೇಕೋ ಆ ಮಾತ್ರೆ ಬಿಟ್ಟು, ಬೇರೆ ತೆಗೆದುಕೊಂಡಿದ್ದೆ. ಆಗ ಡೋಸ್ ಹೆಚ್ಚಾದ ಕಾರಣ ಸ್ವಲ್ಪ ನಿತ್ರಾಣವಾಗಿತ್ತು. ಇದನ್ನು ನೋಡಿದ ನನ್ನ ಪತ್ನಿ ಸ್ವಲ್ಪ ಗಾಬರಿಯಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿದರು ಎಂದು ಹೇಳಿದರು.

ನಿಮಗೆ ರಾಜಕೀಯ ಒತ್ತಡ ಇತ್ತೇ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒತ್ತಡ ಯಾವಾಗಲೂ ಇರುತ್ತದೆ. ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ. ಸಾಧಾರಣವಾಗಿ ನಾನು ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸ ಇದೆ. ನಾನು ಪ್ರತಿ ಬಾರಿ ಅರ್ಧ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ಆದರೆ ಮೊನ್ನೆ ಒಂದು ಮಾತ್ರೆ ಸೇವಿಸಿದೆ ಎಂದರು.

ಇನ್ನು, ಡಿಕೆ ಶಿವಕುಮಾರ್ ಅವರ ವಿಡಿಯೋ ಹೇಳಿಕೆಗೆ ಉತ್ತರಿಸಿದ ಅವರು, ಡಿಕೆಶಿ ಹೀಗೆ ಮಾತನಾಡುತ್ತಿರುವುದು ಮೊದಲನೇ ಬಾರಿಯಲ್ಲ. ಈ ಹಿಂದೆ ಅವರ ಮನೆ ಮೇಲೆ ತನಿಖಾ ಸಂಸ್ಥೆಗಳು ದಾಳಿ ಆದಾಗಲೂ ಹೀಗೆ ಮಾತನಾಡಿದ್ದರು. ಇದು ಅವರ ಸ್ವಭಾವ ಆಗಿದೆ. ಇತ್ತೀಚಿಗೆ ವಿಧಾನಸಭಾ ಉಪಚುನಾವಣೆಗಳಲ್ಲಿ ಅವರ ಪಕ್ಷ ಸೋತಿದೆ. ಅದರಲ್ಲೂ ಆರ್.ಆರ್ ನಗರದ ಸೋಲಿನಿಂದ ಅವರಿಗೆ ಮತಿಭ್ರಮಣೆಯಾಗಿರಬೇಕು ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News